
ಬೆಳ್ತಂಗಡಿ: ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸ್‌ಐಟಿ (ವಿಶೇಷ ತನಿಖಾ ತಂಡ) ಬಂಧಿಸಿರುವ ಆರೋಪಿ ಚಿನ್ನಯ್ಯ ಸಿ.ಎನ್.ಗೆ ಆಶ್ರಯ ನೀಡಿದ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದ ಮೇಲೆ ಮಂಗಳವಾರ (ಆ.26) ಬೆಳಗ್ಗೆ ಸುಮಾರು 9:20ಕ್ಕೆ ಎಸ್‌ಐಟಿ ತಂಡ ದಾಳಿ ನಡೆಸಿದೆ.
ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಸೋಮವಾರ (ಆ.25) ಬೆಳ್ತಂಗಡಿ ನ್ಯಾಯಾಧೀಶರಿಂದ ಸರ್ಚ್ ವಾರಂಟ್ ಪಡೆದುಕೊಂಡು, ಆರೋಪಿ ಚಿನ್ನಯ್ಯನ ಜೊತೆಯಲ್ಲೇ ತಿಮರೋಡಿ ಮನೆಗೆ ಬಂದು ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಬುರುಡೆ ಗ್ಯಾಂಗ್‌ನ ಕೇಂದ್ರ?
ಚಿನ್ನಯ್ಯನಿಗೆ ಮಹೇಶ್ ಶೆಟ್ಟಿ ಕಳೆದ ಎರಡು ತಿಂಗಳಿಂದ ಆಶ್ರಯ ನೀಡಿದ್ದರಿಂದ, ಚಿನ್ನಯ್ಯನಿಗೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲು ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಈ ದಾಳಿ ವೇಳೆ ಮಹೇಶ್ ಶೆಟ್ಟಿ ಮತ್ತು ಅವರ ಸಹೋದರ ಮೋಹನ್ ಶೆಟ್ಟಿ ಅವರ ಮನೆಗಳ ಮೇಲೂ ಪರಿಶೀಲನೆ ನಡೆಸಲಾಗಿದೆ.
ಬುರುಡೆ ಗ್ಯಾಂಗ್ ಪ್ರತಿ ಹಂತದಲ್ಲೂ ತಿಮರೋಡಿ ಮನೆಯಲ್ಲಿಯೇ ಸೇರುತ್ತಿತ್ತು ಮತ್ತು ಇಲ್ಲಿಂದಲೇ ಎಲ್ಲ ಯೋಜನೆಗಳು ಆರಂಭವಾಗಿವೆ ಎಂಬ ಮಾಹಿತಿ ಎಸ್‌ಐಟಿ ತಂಡಕ್ಕೆ ದೊರೆತ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ನಡೆದ ಕೆಲವು ಸುದ್ದಿಗೋಷ್ಠಿಗಳು, ಮಾಸ್ಕ್ ಕಳಚಿ ನಡೆಸಿದ ಸಂದರ್ಶನಗಳು ಹಾಗೂ ಯೂಟ್ಯೂಬರ್ ಸಮೀರ್ ನಡೆಸಿದ ಕೆಲವು ವಿಡಿಯೊಗಳನ್ನು ಇದೇ ಸ್ಥಳದಲ್ಲಿ ಮಾಡಿರುವುದು ಬಹಳ ಚರ್ಚೆಯಲ್ಲಿತ್ತು. ಆದ್ದರಿಂದ, ಮಹತ್ವದ ಸಾಕ್ಷಿಗಳು ಲಭ್ಯವಾಗಬಹುದಾದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.

