
ಧಾರವಾಡ: ಜಿಲ್ಲೆಯಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ಗಳ ಕೊರತೆ ಇಲ್ಲದಿರುವುದರಿಂದ ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಮನವಿ ಮಾಡಿದ್ದಾರೆ. ಇಂದು ಧಾರವಾಡ ನಗರದ ಶ್ರೀ ರಾಮ ಎಚ್ಪಿ ಗ್ಯಾಸ್ ಏಜನ್ಸಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಬುಕ್ಕಿಂಗ್ ಮಾಡಿದವರಿಗೆ ಎರಡು ಮೂರು ದಿನ ವಿಳಂಬವಾದರೂ ನಿಯಮಾನುಸಾರ ಎಲ್ಲರಿಗೂ ಸಿಲಿಂಡರ್ ಪೂರೈಸಲಾಗುವುದು ಎಂದು ಸ್ಪಷ್ಟಪಡಿಸಿದರು. ವದಂತಿಗಳಿಗೆ ಮಣಿದು ಅನವಶ್ಯಕವಾಗಿ ಮುಂಗಡ ಬುಕ್ಕಿಂಗ್ ಮಾಡುವುದರಿಂದ ವಿತರಣಾ ವ್ಯವಸ್ಥೆಯ ಮೇಲೆ ಅನಗತ್ಯ ಒತ್ತಡ ಉಂಟಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯ ಸದ್ಯದ ದಾಸ್ತಾನು ಸ್ಥಿತಿಗತಿಯ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ಇಂದು ಜಿಲ್ಲೆಯಲ್ಲಿ ಒಟ್ಟು 16,822 ಗೃಹಬಳಕೆ ಸಿಲೆಂಡರಗಳು ಲಭ್ಯವಿದ್ದು, ಪ್ರತಿದಿನ ಸರಾಸರಿ 10,000 ಸಿಲೆಂಡರಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ. ತುಂಬಿದ ಸಿಲಿಂಡರ್ಗಳ ಸರಬರಾಜಿನಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಏಜೆನ್ಸಿ ಮಾಲೀಕರು ಖಚಿತಪಡಿಸಿದ್ದಾರೆ. ಗೃಹಬಳಕೆ ಸಿಲೆಂಡರ್ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಅಥವಾ ಅನಧಿಕೃತವಾಗಿ ಗ್ಯಾಸ್ ವರ್ಗಾವಣೆ ಮಾಡುವುದು 2000ರ ಪೂರೈಕೆ ಮತ್ತು ಹಂಚಿಕೆ ನಿಯಂತ್ರಣ ಕಾಯ್ದೆಯಡಿ ಗಂಭೀರ ಅಪರಾಧವಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಇಂತಹ ಅನಧಿಕೃತ ಚಟುವಟಿಕೆಗಳ ಬಗ್ಗೆ ತಕ್ಷಣ ಆಹಾರ ನಿರೀಕ್ಷಕರಿಗೆ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದರು.

ಗ್ಯಾಸ್ ಬುಕ್ಕಿಂಗ್ ಸಂಬಂಧ ಸರ್ಕಾರದ ಹೊಸ ಮಾರ್ಗಸೂಚಿಗಳನ್ನು ವಿವರಿಸಿದ ಜಿಲ್ಲಾಧಿಕಾರಿಗಳು, ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಹೊಂದಿರುವವರು 45 ದಿನಕ್ಕೊಮ್ಮೆ ಹಾಗೂ ಇತರ ಗ್ರಾಹಕರು 25 ದಿನಕ್ಕೊಮ್ಮೆ ಮಾತ್ರ ಸಿಲಿಂಡರ್ ಬುಕ್ ಮಾಡಲು ಅವಕಾಶವಿದೆ ಎಂದು ಹೇಳಿದರು. ಈ ಹಿಂದೆ ದಿನವೊಂದಕ್ಕೆ 400 ರಿಂದ 450 ಸಿಲಿಂಡರ್ ವಿತರಿಸಲಾಗುತ್ತಿತ್ತು, ಆದರೆ ಈಗ ಈ ಪ್ರಮಾಣ 350ಕ್ಕೆ ಇಳಿಕೆಯಾಗಿದ್ದರಿಂದ ವಿತರಣೆಯಲ್ಲಿ 5 ರಿಂದ 6 ದಿನಗಳ ವಿಳಂಬ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಸಹಕರಿಸಬೇಕು ಹಾಗೂ ಅಗತ್ಯವಿದ್ದಾಗ ಮಾತ್ರ ಬುಕ್ಕಿಂಗ್ ಮಾಡಬೇಕು ಎಂದು ವಿನಂತಿಸಿದರು. ಏಜೆನ್ಸಿ ಸಿಬ್ಬಂದಿಗಳಿಗೆ ಸೂಚನೆ ನೀಡಿದ ಅವರು, ಮೊದಲು ಬುಕ್ಕಿಂಗ್ ಮಾಡಿದವರಿಗೆ ಆದ್ಯತೆ ನೀಡಬೇಕು ಮತ್ತು ವಿಳಂಬದ ಬಗ್ಗೆ ಗ್ರಾಹಕರಿಗೆ ಸಕಾಲಕ್ಕೆ ಮಾಹಿತಿ ನೀಡಿ ಗೊಂದಲ ನಿವಾರಿಸಬೇಕು ಎಂದು ನಿರ್ದೇಶಿಸಿದರು. ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

