‘ಧರ್ಮಸ್ಥಳ ಪ್ರಕರಣ: ಸರ್ಕಾರ ಆರೋಪಿಗಳನ್ನು ಬಂಧಿಸುವ ನಾಟಕವಾಡಿದೆ’ – ಕೇಂದ್ರ ಸಚಿವ ಪ್ರಹ್ಲಾದ ಜೋಶಿ

Spread the love

ಹುಬ್ಬಳ್ಳಿ: ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರವು ಆರಂಭದಲ್ಲೇ ಎಡವಿದೆ. ಪವಿತ್ರ ಕ್ಷೇತ್ರಕ್ಕೆ ಮಸಿ ಬಳಿದ ನಂತರ ಆರೋಪಿಗಳನ್ನು ಬಂಧಿಸುವ ನಾಟಕವಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಇಡೀ ಪ್ರಹಸನಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಅವರು ಆರೋಪಿಸಿದ್ದಾರೆ.

‘ಇದು ಪ್ರಾಯೋಜಿತ ದಾಳಿ’
ಈ ಘಟನೆಯು ಹಿಂದೂ ಧಾರ್ಮಿಕ ನಂಬಿಕೆಗಳ ಮೇಲೆ ನಡೆದ ‘ಪ್ರಾಯೋಜಿತ ದಾಳಿ’ ಎಂದು ಜೋಶಿ ಬಣ್ಣಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರವು ಹಿಂದೂ ಧಾರ್ಮಿಕತೆಯ ವಿರುದ್ಧ ಇಲ್ಲಸಲ್ಲದ ಷಡ್ಯಂತ್ರದ ಟೂಲ್‌ಕಿಟ್ ಬಳಸಿಕೊಂಡಿದೆ ಎಂದು ಕಿಡಿ ಕಾರಿದರು. “ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಸರ್ಕಾರವು ಮುಸುಕುಧಾರಿ ಮತ್ತು ಪ್ರಾಯೋಜಿತ ಯೂಟ್ಯೂಬರ್‌ಗಳ ಮಾತುಗಳನ್ನು ನಂಬಿ ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತಂದಿದೆ. ಇದು ಐತಿಹಾಸಿಕ ದುರಂತ” ಎಂದು ಖಂಡಿಸಿದರು.

ಸರ್ಕಾರಕ್ಕೆ ಜೋಶಿ ಪ್ರಶ್ನೆಗಳು
ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಹ್ಲಾದ ಜೋಶಿ ಅವರು ರಾಜ್ಯ ಸರ್ಕಾರಕ್ಕೆ ಕೆಲವು ಪ್ರಮುಖ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ:

  • ಕಾಣದ ಕೈಗಳಿಂದ ಉದ್ದೇಶಪೂರ್ವಕವಾಗಿ ಈ ಪ್ರಯತ್ನ ನಡೆದಿದೆಯೇ? ಯಾರ ಆಜ್ಞೆಯ ಮೇರೆಗೆ ಇಂತಹ ದುಸ್ಸಾಹಸಕ್ಕೆ ಕೈಹಾಕಲಾಯಿತು?
  • ಪ್ರಕರಣದಲ್ಲಿ ಸತ್ಯಗಳು ಕಣ್ಣೆದುರೇ ಇದ್ದರೂ, ಕಾಂಗ್ರೆಸ್ ಸರ್ಕಾರ ಏಕೆ ಮೌನ ವಹಿಸಿದೆ?
  • ಪ್ರಕರಣವು ಷಡ್ಯಂತ್ರ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದಾರೆ. ಹಾಗಿದ್ದ ಮೇಲೆ ಈ ‘ನಾಟಕದ ರೂವಾರಿಗೆ’ ಯಾವಾಗ ಶಿಕ್ಷೆ ನೀಡುತ್ತೀರಿ? ಹಣಕಾಸಿನ ವ್ಯವಹಾರದ ಮೂಲವನ್ನು ಯಾವಾಗ ಬಹಿರಂಗಪಡಿಸುತ್ತೀರಿ?
    ಈ ಎಲ್ಲ ಪ್ರಶ್ನೆಗಳಿಗೆ ರಾಜ್ಯ ಸರ್ಕಾರವು ನಿಷ್ಪಕ್ಷಪಾತ ತನಿಖೆ ನಡೆಸಿ ಉತ್ತರ ನೀಡಬೇಕು ಮತ್ತು ಪ್ರಕರಣದ ಸಂಪೂರ್ಣ ಹೊಣೆ ಹೊರಬೇಕು ಎಂದು ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *