
ಬೆಂಗಳೂರು: ತಹಶೀಲ್ದಾರ್ ನ್ಯಾಯಾಲಯಗಳಲ್ಲಿನ ತಕರಾರು ಪ್ರಕರಣಗಳು ನಿಗದಿತ ಅವಧಿಯೊಳಗೆ ವಿಲೇವಾರಿಯಾಗದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದರು.
ಸೋಮವಾರ ವಿಕಾಸಸೌಧದಿಂದ ರಾಜ್ಯದ ಎಲ್ಲ ತಹಶೀಲ್ದಾರ್‌ಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. “ಕಳೆದ ಎರಡು ವರ್ಷಗಳಲ್ಲಿ ತಹಶೀಲ್ದಾರ್ ನ್ಯಾಯಾಲಯಗಳಲ್ಲಿನ ತಕರಾರು ಅರ್ಜಿಗಳ ವಿಲೇವಾರಿಯಲ್ಲಿ ಉತ್ತಮ ಪ್ರಗತಿ ಕಂಡುಬಂದಿತ್ತು. ಒಂದು ಪ್ರಕರಣ ಇತ್ಯರ್ಥಕ್ಕೆ 212 ದಿನಗಳಿಂದ 82 ದಿನಕ್ಕೆ ಇಳಿಸಲಾಗಿತ್ತು. ಆದರೆ, ಈಗ ಮತ್ತೆ ವಿಲೇವಾರಿ ಪ್ರಕ್ರಿಯೆ ನಿಧಾನವಾಗುತ್ತಿರುವುದು ಬೇಸರ ತಂದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ತಕರಾರು ಅರ್ಜಿಗಳ ವಿಲೇವಾರಿಗಾಗಿ ಜನರು ಪದೇಪದೆ ಕಚೇರಿಗೆ ಅಲೆಯುವುದನ್ನು ತಡೆಯುವ ಉದ್ದೇಶದಿಂದ ಅಭಿಯಾನ ಮಾದರಿಯಲ್ಲಿ ಕೆಲಸ ಕೈಗೊಳ್ಳಲಾಗಿತ್ತು. ಕೆಲವು ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಮುಂದೆ 90 ದಿನಗಳನ್ನು ಮೀರಿ ಯಾವುದೇ ಪ್ರಕರಣ ಉಳಿಸಿಕೊಂಡರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ” ಎಂದು ಅವರು ಎಚ್ಚರಿಕೆ ನೀಡಿದರು.
ಪೋಡಿ ದುರಸ್ತಿಗೂ ಚುರುಕು ಮುಟ್ಟಿಸಲು ಸೂಚನೆ
ರಾಜ್ಯಾದ್ಯಂತ ಪೋಡಿ ದುರಸ್ತಿ ಅಭಿಯಾನಕ್ಕೆ ಚಾಲನೆ ನೀಡಿದರೂ ನಿರೀಕ್ಷಿತ ವೇಗದಲ್ಲಿ ಕೆಲಸ ನಡೆಯುತ್ತಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. “ದಶಕಗಳ ಹಿಂದೆಯೇ ಸರ್ಕಾರದಿಂದ ಜಮೀನು ಪಡೆದರೂ ಪೋಡಿಯಾಗದೆ ಲಕ್ಷಾಂತರ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ನೀಡಲು ಅಭಿಯಾನ ಆರಂಭಿಸಲಾಗಿತ್ತು” ಎಂದರು.
ನಿಯಮದಂತೆ ತಹಶೀಲ್ದಾರ್‌ಗಳು ನಮೂನೆ 1-5 ದಾಖಲೆಗಳನ್ನು ಸಿದ್ಧಪಡಿಸಿ ಭೂ ಮಾಪನ ಇಲಾಖೆಗೆ ನಮೂನೆ 6-10 ಕೆಲಸಕ್ಕಾಗಿ ಕಳುಹಿಸಬೇಕು. ಆದರೆ, ಬಹುತೇಕ ಜಿಲ್ಲೆಗಳಲ್ಲಿ ಈ ಕೆಲಸ ನಿಧಾನವಾಗಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಮತ್ತು ತುಮಕೂರು ಜಿಲ್ಲೆಗಳಲ್ಲಿ ಪೋಡಿ ದುರಸ್ತಿ ಕೆಲಸ ಚುರುಕುಗೊಂಡಿರುವ ಬಗ್ಗೆ ಅಧಿಕಾರಿಗಳ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಅವರು, ಇತರ ಜಿಲ್ಲೆಗಳೂ ವೇಗ ಹೆಚ್ಚಿಸುವಂತೆ ಸೂಚಿಸಿದರು. ಕನಿಷ್ಠ ದಾಖಲೆಗಳಿದ್ದರೂ ಸಹ ಅಂತಹ ಪ್ರಕರಣಗಳನ್ನು ಪೋಡಿ ಮಾಡಿಕೊಡಬೇಕು ಎಂದು ತಾಕೀತು ಮಾಡಿದರು.
ಭೂ ದಾಖಲೆಗಳ ಸ್ಕ್ಯಾನಿಂಗ್‌ಗೆ ಒತ್ತು
ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಕೆಲಸದಲ್ಲೂ ಕೆಲವು ತಹಶೀಲ್ದಾರ್‌ಗಳು ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಸಚಿವರು ಆಕ್ರೋಶ ವ್ಯಕ್ತಪಡಿಸಿ, ನೋಟಿಸ್ ನೀಡುವ ಎಚ್ಚರಿಕೆ ನೀಡಿದರು. “ಭೂ ದಾಖಲೆಗಳ ಕಳವು ಮತ್ತು ತಿದ್ದುಪಡಿ ತಡೆಯಲು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸುವ ಯೋಜನೆ ಜಾರಿಗೆ ತರಲಾಗಿದೆ. ಪ್ರತಿ ಕಚೇರಿಗೆ ಅಗತ್ಯ ಸ್ಕ್ಯಾನರ್‌ಗಳು, ಕಂಪ್ಯೂಟರ್‌ಗಳು ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳನ್ನು ಒದಗಿಸಿದರೂ ಗುರಿ ತಲುಪಲು ವಿಫಲರಾಗಿದ್ದಾರೆ” ಎಂದರು.
“ದಿನಕ್ಕೆ 6,000 ಪುಟಗಳನ್ನು ಸ್ಕ್ಯಾನ್ ಮಾಡುವ ಗುರಿ ನೀಡಿದ್ದರೂ ಹಲವು ಕಚೇರಿಗಳಲ್ಲಿ 2,000 ಪುಟಗಳನ್ನೂ ಸ್ಕ್ಯಾನ್ ಮಾಡಲಾಗುತ್ತಿಲ್ಲ. ಸುಮಾರು 100 ಕೋಟಿ ಪುಟಗಳಷ್ಟು ದಾಖಲೆಗಳಿದ್ದು, ಈಗಾಗಲೇ 37.6 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಈ ವರ್ಷಾಂತ್ಯದೊಳಗೆ ಉಳಿದ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಬೇಕು” ಎಂದು ತಾಕೀತು ಮಾಡಿದರು.
ಫೌತಿ ಖಾತೆ ಆಂದೋಲನಕ್ಕೆ ವೇಗ ತುಂಬಲು ಸೂಚನೆ
ರಾಜ್ಯದಲ್ಲಿ ಸುಮಾರು 52 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿವೆ. ಫೌತಿ ಖಾತೆ ಆಂದೋಲನದ ಮೂಲಕ 3.35 ಲಕ್ಷ ಪ್ರಕರಣಗಳಲ್ಲಿ ಜಮೀನುಗಳನ್ನು ವಾರಸುದಾರರ ಹೆಸರಿಗೆ ವರ್ಗಾಯಿಸಲಾಗಿದೆ. ಆದರೆ, ಇದು ತೃಪ್ತಿದಾಯಕವಲ್ಲ ಎಂದ ಸಚಿವರು, “ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕುಗಳಲ್ಲೂ ಅಭಿಯಾನ ಮಾದರಿಯಲ್ಲಿ ಫೌತಿ ಖಾತೆ ಕೆಲಸ ನಡೆಯಬೇಕು” ಎಂದು ಸೂಚಿಸಿದರು.
ಮೃತರ ಹೆಸರಿನಲ್ಲಿರುವ ಜಮೀನುಗಳಿಗೆ ಕೇಂದ್ರ ಸರ್ಕಾರದಿಂದ ಪಿಎಂ ಕಿಸಾನ್, ನೀರಾವರಿ ಮತ್ತು ಯಂತ್ರೋಪಕರಣ ಖರೀದಿ ಸಬ್ಸಿಡಿ ಲಭ್ಯವಾಗುವುದಿಲ್ಲ. ಆದ್ದರಿಂದ ಜನರು ಅರ್ಜಿ ನೀಡದೆ ನಾವೇ ಮನೆ ಬಾಗಿಲಿಗೆ ಹೋಗಿ ಈ ಕೆಲಸ ಮಾಡಿಕೊಡುತ್ತಿದ್ದೇವೆ ಎಂದು ತಿಳಿಸಿದರು.
ಕಂದಾಯ ಗ್ರಾಮಗಳಿಗೆ ಇ-ಖಾತಾ ಜನರೇಟ್ ಮಾಡಲು ಆದೇಶ
ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿದ ನಂತರವೂ ತಹಶೀಲ್ದಾರ್‌ಗಳು ತಮ್ಮ ಕೆಲಸ ಮುಗಿಯಿತು ಎಂದು ವಿರಮಿಸುವಂತಿಲ್ಲ. ಬದಲಾಗಿ ಇ-ಖಾತಾ ಮತ್ತು ಇ-ಆಸ್ತಿ ಮಾಡಿಕೊಡಬೇಕು ಎಂದು ತಾಕೀತು ಮಾಡಿದರು. ಈಗಾಗಲೇ 1.11 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ನವೆಂಬರ್ ಅಂತ್ಯದೊಳಗೆ 1.62 ಲಕ್ಷ ಫಲಾನುಭವಿಗಳಿಗೆ ಇ-ಖಾತಾ ಇರುವ ಪಕ್ಕಾ ಹಕ್ಕುಪತ್ರ ನೀಡುವ ಗುರಿ ತಲುಪಬೇಕು ಎಂದರು.
ಸಭೆಯಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

