

ಹುಬ್ಬಳ್ಳಿ: ನಗರದ ಸುಪ್ರಸಿದ್ಧ ‘ಗಣೇಶಪೇಟ ಕಾ ರಾಜಾ’ ಗಣೇಶ ಮೂರ್ತಿಯ ಆಗಮನದ ಮೆರವಣಿಗೆಗೆ ಹು-ಧಾ ಪೂರ್ವ ಶಾಸಕ ಮಹೇಶ ತೆಂಗಿನಕಾಯಿ ಅವರು ಚಾಲನೆ ನೀಡಿದರು. ಸೂರ್ಯವಂಶ ಕ್ಷತ್ರೀಯ ಕಲಾಲ ಸಮಾಜ ಹಾಗೂ ಯುವಕ ಮಂಡಳಿ ಆಶ್ರಯದಲ್ಲಿ ಸೋಮವಾರ ಈ ಉತ್ಸವಕ್ಕೆ ಭವ್ಯವಾದ ಚಾಲನೆ ದೊರೆಯಿತು.
ಮೆರವಣಿಗೆ ಉದ್ಘಾಟಿಸಿ ಮಾತನಾಡಿದ ಶಾಸಕ ತೆಂಗಿನಕಾಯಿ, “ಈ ಗಣೇಶೋತ್ಸವದಲ್ಲಿ ಎಲ್ಲಾ ಧರ್ಮದ ಜನರು ಒಗ್ಗೂಡಿ ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ” ಎಂದರು.
ದಾಜಿಬಾನ ಪೇಟೆಯ ತುಳಜಾಭವಾನಿ ಸರ್ಕಲ್ನಿಂದ ಆರಂಭವಾದ ಮೆರವಣಿಗೆ ಗಣೇಶಪೇಟೆಯ ಮುಕ್ಕೇರಿ ಓಣಿಯಲ್ಲಿ ಸಮಾಪ್ತಿಯಾಯಿತು.
ಪೊಲೀಸ್ ಕಮಿಷನರ್ ಭೇಟಿ
ಮೆರವಣಿಗೆ ಸಂದರ್ಭದಲ್ಲಿ ಹು-ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು. “ಹುಬ್ಬಳ್ಳಿ-ಧಾರವಾಡದಲ್ಲಿ ಗೌರಿ-ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳು ಒಂದೇ ಸಮಯದಲ್ಲಿ ಆರಂಭಗೊಂಡಿವೆ. ಇದು ನಮ್ಮ ನಗರದಲ್ಲಿ ಎಲ್ಲಾ ಜಾತಿ-ಧರ್ಮದ ಜನರು ಸಾಮರಸ್ಯದಿಂದ ಬದುಕುತ್ತಾರೆ ಎಂಬುದಕ್ಕೆ ಸಾಕ್ಷಿ. ಎಲ್ಲರೂ ಶಾಂತಿಯುತವಾಗಿ ಹಬ್ಬ ಆಚರಿಸಬೇಕು” ಎಂದು ಕರೆ ನೀಡಿದರು. ಗಣೇಶನ ಕೃಪೆಗೆ ಪಾತ್ರರಾಗಲು ಮಹಿಳೆಯರು ಮತ್ತು ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಸಮಾಜದ ರಾಜ್ಯ ಅಧ್ಯಕ್ಷ ಲಕ್ಷ್ಮಣ ಎಂ. ಗಂಡಗಾಳೇಕರ ಅವರು ಗಣೇಶೋತ್ಸವದ ಪ್ರಮುಖ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ ಎಲ್ಲರೂ ಭಾಗವಹಿಸುವಂತೆ ಕೋರಿದರು.
- ಮಹಾ ಮಂಗಳಾರತಿ: ಆಗಸ್ಟ್ 27, ಬುಧವಾರ ಸಂಜೆ 6:30ಕ್ಕೆ ಮೊದಲ ಮಹಾ ಮಂಗಳಾರತಿ ನಡೆಯಲಿದೆ.
- ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ: ಸೆಪ್ಟೆಂಬರ್ 1, ಸೋಮವಾರದಂದು ಪೂಜೆ ಮತ್ತು ಸಂಜೆ 6 ಗಂಟೆಗೆ ಪ್ರಸಾದ ವಿತರಣೆ ಇರುತ್ತದೆ.
- ಬೆಳ್ಳಿ ಅಳಾವು (ಸವಾಲ್) ಕಾರ್ಯಕ್ರಮ: ಸೆಪ್ಟೆಂಬರ್ 1, ಸೋಮವಾರ ರಾತ್ರಿ 8 ಗಂಟೆಗೆ ಗಣೇಶ ಮೂರ್ತಿಯ ಮೇಲಿರುವ ಬೆಳ್ಳಿ ಮತ್ತು ಅಂತರಕಾಯಿ ಅಳಾವು ಕಾರ್ಯಕ್ರಮ ಜರುಗಲಿದೆ.
- ವಿಸರ್ಜನೆ: ಸೆಪ್ಟೆಂಬರ್ 6, ಶನಿವಾರ ಮಧ್ಯಾಹ್ನ 2 ಗಂಟೆಗೆ ‘ಗಣೇಶಪೇಟ ಕಾ ರಾಜಾ’ ವಿಸರ್ಜನೆ ನಡೆಯಲಿದೆ.
ಈ ಸಂದರ್ಭದಲ್ಲಿ ಸಮಾಜದ ಹುಬ್ಬಳ್ಳಿ ಘಟಕದ ಅಧ್ಯಕ್ಷ ಸದಾನಂದ ಖಜೂರಕರ, ಉಪಾಧ್ಯಕ್ಷ ಕೃಷ್ಣ ಎಂ. ಗಂಡಗಾಳೇಕರ, ಸದಸ್ಯರಾದ ಮನೋಜ ಭೀಮಕರ, ಪ್ರದೀಪ್ ಜೀಕನೆಕರ, ವಿನಾಯಕ ಮಹೇಂದ್ರಕರ, ಸೇರಿದಂತೆ ಸಮಾಜದ ಹಿರಿಯರು, ಮಹಿಳಾ ಮಂಡಳಿ ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿದ್ದರು.

