ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನ ಆಹ್ವಾನಿಸಬಾರದೆಂದು ಸಂವಿಧಾನದಲ್ಲಿ ಇದೆಯೇ?’: ಸಚಿವ ಸಂತೋಷ್ ಲಾಡ್ ಪ್ರಶ್ನೆ

Spread the love

ಬಳ್ಳಾರಿ: ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ವ್ಯಕ್ತಪಡಿಸಿರುವ ವಿರೋಧಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿರುಗೇಟು ನೀಡಿದ್ದಾರೆ. “ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಬಾರದೆಂದು ನಮ್ಮ ಸಂವಿಧಾನದಲ್ಲಿ ಇದೆಯೇ? ಎಲ್ಲದಕ್ಕೂ ಧರ್ಮ, ಜಾತಿಯನ್ನು ಹುಡುಕುತ್ತಾ ಹೋದರೆ ಏನೂ ಮಾಡಲಾಗುವುದಿಲ್ಲ” ಎಂದು ಲಾಡ್ ಪ್ರಶ್ನಿಸಿದ್ದಾರೆ.

ನಮ್ಮ ದೇಶದಲ್ಲಿ ಅತೀ ಹೆಚ್ಚು ದಾನ ಮಾಡುವವರು ಅಜೀಂ ಪ್ರೇಮ್‌ಜಿ ಫೌಂಡೇಷನ್‌ನವರು. ಅವರು ಸುಮಾರು ಎರಡೂವರೆ ಲಕ್ಷ ಕೋಟಿ ರೂಪಾಯಿ ದಾನ ಮಾಡಿದ್ದಾರೆ. ಹಾಗಾದರೆ, ದಾನ ಮಾಡಿದವರು ಯಾವ ಸಮಾಜದವರು? ಅದನ್ನು ಪಡೆದವರು ಯಾವ ಸಮಾಜದವರು ಎಂದು ಪ್ರಶ್ನಿಸುವುದು ಸರಿಯೇ?” ಎಂದು ಸಚಿವರು ಬಿಜೆಪಿ ನಾಯಕರನ್ನು ಕುಟುಕಿದ್ದಾರೆ.

“ನಮ್ಮ ಸಂವಿಧಾನದಲ್ಲಿ ದಸರಾವನ್ನು ಯಾರು ಉದ್ಘಾಟಿಸಬೇಕು ಅಥವಾ ಯಾರು ಮಾಡಬಾರದು ಎಂದು ಹೇಳಿಲ್ಲ. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಎಲ್ಲರೂ ಸ್ವಾಗತಿಸಬೇಕು. ಈ ರೀತಿ ಪ್ರತಿಭಟನೆ ಮಾಡುವುದು ಸರಿಯಲ್ಲ,” ಎಂದಿದ್ದಾರೆ.
ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನು ಉದಾಹರಣೆಯಾಗಿ ನೀಡಿದ ಸಚಿವ ಲಾಡ್, “ಅಬ್ದುಲ್ ಕಲಾಂ ಅವರು ನಮ್ಮ ದೇಶದ ರಾಷ್ಟ್ರಪತಿಯಾಗಿದ್ದಾಗ ನಾವು ಯಾರಾದರೂ ವಿರೋಧ ಮಾಡಿದ್ದೇವಾ? ಹಾಗಾದರೆ ಬಿಜೆಪಿಗರು ಅಬ್ದುಲ್ ಕಲಾಂ ಅವರನ್ನು ಹಿಂದೂ ವಿರೋಧಿ ಅಲ್ಲ ಎನ್ನುತ್ತಾರಾ? ಹಾಗಾದರೆ ಬಾನು ಮುಷ್ತಾಕ್ ಅವರು ಹಿಂದೂ ವಿರೋಧಿನಾ? ಇಲ್ಲವಲ್ಲ,” ಎಂದು ಪ್ರಶ್ನಿಸಿದರು.

ಪ್ರತಾಪ್ ಸಿಂಹ ಹೇಳಿದ್ದೇನು?
ಈ ಹಿಂದಿನ ಹೇಳಿಕೆಯಲ್ಲಿ, ಮಾಜಿ ಸಂಸದ ಪ್ರತಾಪ್ ಸಿಂಹ, “ನಾಡಿನ ಅಧಿದೇವತೆ ಚಾಮುಂಡಿ ತಾಯಿಯ ಪೂಜೆ ಮತ್ತು ನಾಡಹಬ್ಬ ದಸರಾವನ್ನು ಅತ್ಯಂತ ಭಕ್ತಿ ಭಾವದಿಂದ ಆಚರಿಸಲಾಗುತ್ತದೆ. ಇದು ಕೇವಲ ಸರ್ಕಾರಿ ಕಾರ್ಯಕ್ರಮವಲ್ಲ. ಧಾರ್ಮಿಕ ಆಚರಣೆಗೂ ಬಾನು ಮುಷ್ತಾಕ್ ಅವರಿಗೆ ಏನು ಸಂಬಂಧ? ಮುಸ್ಲಿಂ ಧರ್ಮದಲ್ಲಿ ಅಲ್ಲಾಹ್ ಹೊರತುಪಡಿಸಿ ಬೇರೆ ದೇವರನ್ನು ನಂಬುವುದಿಲ್ಲ. ಹಾಗಾದರೆ ಬಾನು ಅವರು ಚಾಮುಂಡಿ ತಾಯಿಯನ್ನು ನಂಬುತ್ತಾರೆಯೇ?” ಎಂದು ಪ್ರಶ್ನಿಸಿದ್ದರು.
“ಅನಿಷ್ಠ ಮಹಿಷ ದಸರಾ ಉದ್ಘಾಟನೆ ಮಾಡಿದ ಪರಂಪರೆ ನಿಮ್ಮದು. ದಸರಾ ಉದ್ಘಾಟಕರ ಹೆಸರಿನ ಬಗ್ಗೆ ಮರು ಪರಿಶೀಲನೆ ಮಾಡಿ,” ಎಂದು ಪ್ರತಾಪ್ ಸಿಂಹ ಆಗ್ರಹಿಸಿದ್ದರು.

Leave a Reply

Your email address will not be published. Required fields are marked *