ನೇಮಕಾತಿಗಾಗಿ ಭುಗಿಲೆದ್ದ ಆಕ್ರೋಶ: ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳಿಂದ ಬೃಹತ್ ಪ್ರತಿಭಟನೆ

Spread the love

ಧಾರವಾಡ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 2.50 ಲಕ್ಷಕ್ಕೂ ಅಧಿಕ ಹುದ್ದೆಗಳ ಭರ್ತಿಗೆ ಕೂಡಲೇ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿ, ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ (ಅಕ್ಸಾ) ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಸಹಸ್ರಾರು ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದರು. ಬೆಳಿಗ್ಗೆ 10 ಗಂಟೆಗೆ ಶ್ರೀನಗರ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಜುಬಿಲಿ ವೃತ್ತದವರೆಗೆ ಸಾಗಿತು. ಈ ವೇಳೆ ಸಾವಿರಾರು ವಿದ್ಯಾರ್ಥಿಗಳು ಸರ್ಕಾರದ ವಿಳಂಬ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ತೀವ್ರತೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡು ವಾಹನ ಸವಾರರು ತೊಂದರೆ ಅನುಭವಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕ ಅಭ್ಯರ್ಥಿಗಳು ತಮ್ಮ ಅಳಲನ್ನು ಹಂಚಿಕೊಂಡರು. “ಕುಟುಂಬದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ ಸಾಲ ಮಾಡಿ ಓದುತ್ತಿದ್ದೇವೆ. ನಮಗೆ ಬೇಕಿರುವುದು ಸರ್ಕಾರದ 3,000 ರೂಪಾಯಿ ಭತ್ಯೆಯಲ್ಲ, ಬದಲಾಗಿ ಶಾಶ್ವತ ಉದ್ಯೋಗ” ಎಂದು ಕೆಲವರು ಕಣ್ಣೀರಿಟ್ಟು ಹೇಳಿದರು. 2019ರ ಕೆಪಿಎಸ್‌ಸಿ ನೇಮಕಾತಿಗಳ ವಿಳಂಬ ಹಾಗೂ ದೀರ್ಘಕಾಲದಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದ ಸರ್ಕಾರದ ಧೋರಣೆ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳ ಭವಿಷ್ಯಕ್ಕೆ ಹಾನಿಯಾಗಿದೆ ಎಂದು ಅವರು ದೂರಿದರು.

ಪ್ರತಿಭಟನಾಕಾರರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರ ಭಾವಚಿತ್ರಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಭಾಷಣ ಮಾಡಲು ಆಗಮಿಸಿದ್ದ ವಿರೋಧ ಪಕ್ಷದ ನಾಯಕರು ಆರ್. ಅಶೋಕ, ಛಲವಾದಿ ನಾರಾಯಣಸ್ವಾಮಿ ಹಾಗೂ ಅರವಿಂದ ಬೆಲ್ಲದ ಅವರಿಗೆ ‘ಗೋ ಬ್ಯಾಕ್’ ಘೋಷಣೆ ಕೂಗಿ, ತಮ್ಮ ಹೋರಾಟವು ರಾಜಕೀಯ ರಹಿತವಾಗಿದ್ದು ಕೇವಲ ಉದ್ಯೋಗಕ್ಕಾಗಿ ನಡೆಯುತ್ತಿರುವುದು ಎಂದು ಸ್ಪಷ್ಟಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಮನವಿ ಸ್ವೀಕರಿಸಿ, ಅಭ್ಯರ್ಥಿಗಳ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಮಹಿಳೆಯೊಬ್ಬರು ತನ್ನ ಹಸುಗೂಸನ್ನು ಮನೆಯಲ್ಲಿ ಬಿಟ್ಟು ಉದ್ಯೋಗಕ್ಕಾಗಿ ಬೀದಿಗಿಳಿದಿದ್ದ ದೃಶ್ಯ ಮನಕಲಕುವಂತಿತ್ತು. ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಒಳ ಮೀಸಲಾತಿ ಸಂಬಂಧಿತ ವಿಚಾರಗಳಿಂದ ನೇಮಕಾತಿ ಪ್ರಕ್ರಿಯೆ ತಾತ್ಕಾಲಿಕವಾಗಿ ವಿಳಂಬವಾಗಿದ್ದು, ಶೀಘ್ರದಲ್ಲೇ ಪಾರದರ್ಶಕವಾಗಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.

ಇನ್ನೊಂದೆಡೆ ವಿರೋಧ ಪಕ್ಷದ ನಾಯಕರು ಸರ್ಕಾರದ ವಿಫಲತೆಯನ್ನು ತೀವ್ರವಾಗಿ ಟೀಕಿಸಿದರೆ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಕೇಂದ್ರ ಸರ್ಕಾರದ ಉದ್ಯೋಗ ಸೃಷ್ಟಿ ವಿಚಾರದಲ್ಲಿಯೂ ವಿದ್ಯಾರ್ಥಿಗಳು ಪ್ರಶ್ನಿಸಬೇಕು ಎಂದು ಸಲಹೆ ನೀಡಿದರು. ಅಂತಿಮವಾಗಿ ಪೊಲೀಸರು ಅಕ್ಸಾ ಅಧ್ಯಕ್ಷ ಕಾಂತಕುಮಾರ್ ಅವರನ್ನು ವಶಕ್ಕೆ ಪಡೆದು ಪ್ರತಿಭಟನಾಕಾರರನ್ನು ಚದುರಿಸಿದರು. ಅಧಿಸೂಚನೆ ಹೊರಡಿಸದಿದ್ದರೆ ಬೆಂಗಳೂರಿನತ್ತ ಪಾದಯಾತ್ರೆ ನಡೆಸುವುದಾಗಿ ಸಂಘಟನೆ ಎಚ್ಚರಿಕೆ ನೀಡಿದೆ.

Leave a Reply

Your email address will not be published. Required fields are marked *