
ಧಾರವಾಡ, ಫೆ.21: ರಾಜ್ಯ ಹವಾಮಾನ ಇಲಾಖೆಯು ಮಾರ್ಚ್‌ನಿಂದ ಮೇ ತಿಂಗಳವರೆಗೆ ತೀವ್ರ ಬೇಸಿಗೆ ಉಂಟಾಗುವ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ಉಂಟಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚಿಸಿದರು.
ಶನಿವಾರದಂದು (ಫೆ.21) ಮಧ್ಯಾಹ್ನ ಜಿಲ್ಲಾಧಿಕಾರಿಗಳ ನೂತನ ಸಭಾಂಗಣದಲ್ಲಿ 2026ನೇ ಸಾಲಿನ ಬೇಸಿಗೆ ಅವಧಿಗೆ ಸಂಬಂಧಿಸಿದಂತೆ ಕುಡಿಯುವ ನೀರು, ಮೇವಿನ ಸಂಗ್ರಹಣೆ ಹಾಗೂ ಅತಿಯಾದ ಬಿಸಿಲಿನಿಂದ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿ ಅವರು ಮಾತನಾಡಿದರು.
ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ವರದಿ ಪ್ರಕಾರ, ಮುಂಬರುವ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅಳ್ನಾವರ ತಾಲೂಕಿನ 4, ಧಾರವಾಡ ತಾಲೂಕಿನ 30, ಹುಬ್ಬಳ್ಳಿ ತಾಲೂಕಿನ 19, ಕುಂದಗೋಳ ತಾಲೂಕಿನ 9, ಕಲಘಟಗಿ ತಾಲೂಕಿನ 16, ನವಲಗುಂದ ತಾಲೂಕಿನ 7 ಹಾಗೂ ಅಣ್ಣಿಗೇರಿ ತಾಲೂಕಿನ 5 ಗ್ರಾಮಗಳು ಸೇರಿ ಒಟ್ಟು 90 ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ. ಈ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾದಲ್ಲಿ ತಕ್ಷಣ ಪೂರೈಕೆ ಮಾಡಲು 186 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ, ಅವುಗಳ ಮಾಲೀಕರಿಂದ ಬಾಡಿಗೆಗೆ ಪಡೆಯಲು ಒಪ್ಪಿಗೆ ಪತ್ರಗಳನ್ನು ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಈಗಾಗಲೇ ಧಾರವಾಡ ತಾಲೂಕಿನ ಹೊಸಟ್ಟಿ, ಮಂಡಿಹಾಳ, ಮನಗುಂಡಿ ಹಾಗೂ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮಗಳಿಗೆ ಬಾಡಿಗೆ ಬೋರವೆಲ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ನವಲಗುಂದ ಹಾಗೂ ಅಣ್ಣಿಗೇರಿ ಪುರಸಭೆಗಳು ಮತ್ತು ಅಳ್ನಾವರ, ಕಲಘಟಗಿ, ಕುಂದಗೋಳ ಪಟ್ಟಣ ಪಂಚಾಯತಿಗಳು ಸೇರಿ ಒಟ್ಟು ಐದು ನಗರ ಸ್ಥಳೀಯ ಸಂಸ್ಥೆಗಳಿದ್ದು, ಇವುಗಳಲ್ಲಿ 100 ವಾರ್ಡ್‌ಗಳಿವೆ. ಈ ಪೈಕಿ 60 ವಾರ್ಡ್‌ಗಳಿಗೆ ಪ್ರತಿದಿನ, 4 ವಾರ್ಡ್‌ಗಳಿಗೆ ಎರಡು ದಿನಕ್ಕೊಮ್ಮೆ, 17 ವಾರ್ಡ್‌ಗಳಿಗೆ ನಾಲ್ಕು ದಿನಕ್ಕೊಮ್ಮೆ ಹಾಗೂ 19 ವಾರ್ಡ್‌ಗಳಿಗೆ ವಾರಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ನೀರು ಸರಬರಾಜು ವ್ಯವಸ್ಥೆಯಲ್ಲಿ ಸುಧಾರಣೆ ತರಲು ಹಾಗೂ ಅಪವ್ಯಯ ತಪ್ಪಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಜಿಲ್ಲೆಯಲ್ಲಿ ಜಾನುವಾರುಗಳಿಗೆ ಅಗತ್ಯವಿರುವಷ್ಟು ಮೇವು ಸಂಗ್ರಹಿಸಲಾಗಿದೆ. ಮುಂದಿನ 28 ವಾರಗಳಿಗೆ ಬೇಕಾಗುವಷ್ಟು ಮೇವಿನ ದಾಸ್ತಾನು ಸಿದ್ಧವಾಗಿದ್ದು, ಬೇಸಿಗೆ ಅವಧಿಯಲ್ಲಿ ಯಾವುದೇ ಕೊರತೆ ಉಂಟಾಗದಂತೆ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉಷ್ಣಾಂಶವು 35ರಿಂದ 40 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಐಇಸಿ ಚಟುವಟಿಕೆಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೂಚಿಸಲಾಯಿತು.
ಬೇಸಿಗೆ ಅವಧಿಯಲ್ಲಿ ಬಿಸಿಗಾಳಿಯಿಂದ ಜನರು ಸುರಕ್ಷಿತರಾಗಿರಲು ಹಾಗೂ ಸಾಂಕ್ರಾಮಿಕ ರೋಗಗಳು ಹರಡದಂತೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಮತ್ತು ಕುಂದಗೋಳ ತಾಲೂಕಿನ 160 ಗ್ರಾಮಗಳಿಗೆ ನೀರು ಪೂರೈಸಲು 60 ಕೆರೆಗಳನ್ನು ಬಳಸಲಾಗುತ್ತಿದೆ. ಅವುಗಳಲ್ಲಿ 40 ಕೆರೆಗಳನ್ನು ಮಲಪ್ರಭಾ ಬಲದಂಡೆ ಕಾಲುವೆಯ ಮೂಲಕ ಈಗಾಗಲೇ ತುಂಬಿಸಲಾಗಿದೆ. ಇನ್ನೂ 10 ಕೆರೆಗಳು ಶೇ.75 ಕ್ಕಿಂತ ಹೆಚ್ಚು ನೀರಿನಿಂದ ತುಂಬಿವೆ. ನವಲಗುಂದ ತಾಲೂಕಿನ ಗೊಬ್ಬರಗುಂಪಿ ಗ್ರಾಮದ ಕೆರೆಯನ್ನು ಹೂಳೆತ್ತುವ ಕಾಮಗಾರಿ ಹಿನ್ನೆಲೆಯಲ್ಲಿ ನೀರು ತುಂಬಿಸಲಾಗಿಲ್ಲ; ಶೀಘ್ರದಲ್ಲೇ ಅದನ್ನು ಭರ್ತಿ ಮಾಡುವ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಮಾತನಾಡಿ, ಮಹಾನಗರ ಪಾಲಿಕೆಯ 82 ವಾರ್ಡ್‌ಗಳಲ್ಲಿ 13 ವಾರ್ಡ್‌ಗಳಿಗೆ 24 ಗಂಟೆಗಳ ನಿರಂತರ ನೀರು ಸರಬರಾಜು ಯೋಜನೆ ಜಾರಿಯಲ್ಲಿದೆ. 25 ವಾರ್ಡ್‌ಗಳಿಗೆ ಪ್ರತಿದಿನ, 8 ವಾರ್ಡ್‌ಗಳಿಗೆ ಮೂರು ದಿನಕ್ಕೊಮ್ಮೆ, 9 ವಾರ್ಡ್‌ಗಳಿಗೆ ನಾಲ್ಕು ದಿನಕ್ಕೊಮ್ಮೆ, 8 ವಾರ್ಡ್‌ಗಳಿಗೆ ಐದು ದಿನಕ್ಕೊಮ್ಮೆ, 12 ವಾರ್ಡ್‌ಗಳಿಗೆ ಆರು ದಿನಕ್ಕೊಮ್ಮೆ, 5 ವಾರ್ಡ್‌ಗಳಿಗೆ ವಾರಕ್ಕೊಮ್ಮೆ ಹಾಗೂ 2 ವಾರ್ಡ್‌ಗಳಿಗೆ ಎಂಟು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ಕಾರ್ಯಪಾಲಕ ಅಭಿಯಂತರ ಜಗದೀಶ ಪಾಟೀಲ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಎಸ್.ವಿ. ಸಂತಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ ಹಾಗೂ ತಹಶೀಲ್ದಾರರಾದ ಡಾ. ಡಿ.ಎಚ್. ಹೂಗಾರ, ಮಹೇಶ ಗಸ್ತಿ, ಜಿ.ಬಿ. ಮಜ್ಜಗಿ, ಸುಧೀರ ಸಾವುಕಾರ, ಬಸವರಾಜ ಹೊಂಕಣನವರ, ಎಂ.ಜಿ. ದಾಸಪ್ಪನವರ ಮತ್ತು ರಾಜು ಮಾವರಕರ್ ಬೇಸಿಗೆ ಸುರಕ್ಷತಾ ಕ್ರಮಗಳ ಕುರಿತು ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸಭೆಗೆ ಸ್ವಾಗತಿಸಿದರು. ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ಸಮಾಲೋಚಕ ವೆಂಕಟೇಶ ಗುಳ್ಳಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

