
ಹೊಸನಗರ: ತಾಲ್ಲೂಕಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಎರಡು ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೇವಲ 48 ಗಂಟೆಗಳಲ್ಲಿ ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿ, ಸುಮಾರು ₹4 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.
ಕಬಳೆ ಗ್ರಾಮದ ರಿಚರ್ಡ್ ಡಿ’ಸೋಜಾ ಮತ್ತು ಮಾಸ್ತಿಕಟ್ಟೆಯ ಶೇಷಾದ್ರಿ ಎಂಬುವವರ ಮನೆಗಳಲ್ಲಿ ಆಗಸ್ಟ್ 21ರಂದು ಕಳ್ಳತನ ನಡೆದಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಒಡೆದು ಒಳನುಗ್ಗಿದ್ದ ಕಳ್ಳರು, ಗೋದ್ರೆಜ್‌ನಲ್ಲಿ ಇಟ್ಟಿದ್ದ ಚಿನ್ನಾಭರಣ ಹಾಗೂ ನಗದನ್ನು ಕದ್ದೊಯ್ದಿದ್ದರು.
ರಿಚರ್ಡ್ ಡಿ’ಸೋಜಾ ಅವರ ಮನೆಯಿಂದ 31 ಗ್ರಾಂ ಚಿನ್ನ (ಮೌಲ್ಯ ₹1.66 ಲಕ್ಷ) ಮತ್ತು ₹70,000 ನಗದು ಕಳ್ಳತನವಾಗಿತ್ತು. ಶೇಷಾದ್ರಿ ಅವರ ಮನೆಯಿಂದ 28 ಗ್ರಾಂ ಚಿನ್ನ (ಮೌಲ್ಯ ₹1.11 ಲಕ್ಷ), ₹30,000 ನಗದು ಮತ್ತು ₹3,000 ಮೌಲ್ಯದ ಬೆಳ್ಳಿ ಆಭರಣಗಳು ದೋಚಲ್ಪಟ್ಟಿದ್ದವು.
ತಾಂತ್ರಿಕ ಸಹಾಯದಿಂದ ಕಾರ್ಯಾಚರಣೆ
ಪ್ರಕರಣ ದಾಖಲಾಗುತ್ತಿದ್ದಂತೆ ಹೊಸನಗರ ವೃತ್ತ ನಿರೀಕ್ಷಕ ಗುರಣ್ಣ ಎಸ್. ಹೆಬ್ಬಾಳ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಯಿತು. ನಗರ ಪೊಲೀಸ್ ಠಾಣೆಯ ಪಿಎಸ್‌ಐ ಶಿವಾನಂದ ಕೋಳಿ, ಬೆರಳಚ್ಚು ವಿಭಾಗ ಹಾಗೂ ಎಎನ್‌ಸಿ ತಂಡದ ತಾಂತ್ರಿಕ ಸಹಕಾರದೊಂದಿಗೆ ತನಿಖೆಯನ್ನು ತೀವ್ರಗೊಳಿಸಿದ್ದರು.
ತನಿಖಾ ತಂಡ ಆಗಸ್ಟ್ 24ರಂದು ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲ್ಲೂಕಿನ ಹನುಮಂತ ತೊಳೆಯಪ್ಪ ಕುಂಚಿಕೊರವರ (26) ಮತ್ತು ಮಂಜುನಾಥ ಬಿಸುಕಲ್ಲೊಡ್ಡರ (36) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ ಒಟ್ಟು 55 ಗ್ರಾಂ ಚಿನ್ನಾಭರಣ (ಸುಮಾರು ₹4 ಲಕ್ಷ ಮೌಲ್ಯ) ಹಾಗೂ ಕೃತ್ಯಕ್ಕೆ ಬಳಸಿದ್ದ ₹70,000 ಮೌಲ್ಯದ ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದೆ.
ಕಡಿಮೆ ಸಮಯದಲ್ಲಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

