​ರೈತರ ಹೊಲಗಳಿಗೆ ಏಳು ತಾಸು ವಿದ್ಯುತ್ ನೀಡಿ: ಶ್ರೀಶೈಲಗೌಡ ಕಮತರ ಆಗ್ರಹ

Spread the love

ಧಾರವಾಡ: ಸರ್ಕಾರ ಮತ್ತು ಹೆಸ್ಕಾಂ ಅಧಿಕಾರಿಗಳು ರೈತರ ಬೇಡಿಕೆಗಳಿಗೆ ಸರಿಯಾಗಿ ಸ್ಪಂದಿಸದ ಕಾರಣ ಅನ್ನದಾತರು ಕೃಷಿಯಿಂದಲೇ ವಿಮುಖರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶ್ರೀಶೈಲಗೌಡ ಕಮತರ ಆತಂಕ ವ್ಯಕ್ತಪಡಿಸಿದ್ದಾರೆ. ರೈತರ ಬೆಳೆಗಳಿಗೆ ಅತ್ಯಗತ್ಯವಾಗಿರುವ ನೀರಾವರಿಗಾಗಿ ಸಮರ್ಪಕ ವಿದ್ಯುತ್ ಪೂರೈಸಬೇಕೆಂದು ಆಗ್ರಹಿಸಿ, ಮನಗುಂಡಿ ಹಾಗೂ ಬೆಳ್ಳಿಗಟ್ಟಿ ಸುತ್ತಮುತ್ತಲಿನ ರೈತರೊಂದಿಗೆ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

​ಕಳೆದ 15 ದಿನಗಳಿಂದ ರೈತರ ಹೊಲಗಳಿಗೆ ವಿದ್ಯುತ್ ವಿತರಣೆಯಲ್ಲಿ ತೀವ್ರ ವ್ಯತ್ಯಯ ಉಂಟಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಬೆಳಗಿನ ಜಾವ 3 ಗಂಟೆಗೆ ವಿದ್ಯುತ್ ನೀಡುವುದು, ಪ್ರತಿ ಗಂಟೆಗೊಮ್ಮೆ ವಿದ್ಯುತ್ ಕಡಿತಗೊಳಿಸುವುದು ಹಾಗೂ ಕಡಿಮೆ ವೋಲ್ಟೇಜ್ ಸಮಸ್ಯೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವೋಲ್ಟೇಜ್ ಏರುಪೇರಿನಿಂದಾಗಿ ಪದೇ ಪದೇ ಫ್ಯೂಸ್‌ಗಳು ಸುಟ್ಟು ಹೋಗುತ್ತಿವೆ ಹಾಗೂ ಬೋರ್‌ವೆಲ್ ಮೋಟರ್‌ಗಳು ದುರಸ್ತಿಗೆ ಬರುತ್ತಿದ್ದು, ಬೆಳೆಗಳಿಗೆ ಸರಿಯಾಗಿ ನೀರುಣಿಸಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಹವಾಲು ತೋಡಿಕೊಂಡರು.

​ಈಗಾಗಲೇ ಬೇಸಿಗೆ ಕಾಲ ಆರಂಭವಾಗಿದ್ದು, ಬೆಳೆಗಳನ್ನು ಉಳಿಸಿಕೊಳ್ಳಲು ವಿದ್ಯುತ್ ಅತ್ಯಗತ್ಯವಾಗಿದೆ. ಆದರೆ ಹೆಸ್ಕಾಂ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಕನಿಷ್ಠ ಸ್ಪಂದನೆಯನ್ನೂ ನೀಡದೆ ನಿರ್ಲಕ್ಷ್ಯ ವಹಿಸುತ್ತಿರುವುದು ದುರದೃಷ್ಟಕರ. ಅಧಿಕಾರಿಗಳು ರೈತರ ಜೀವನದೊಂದಿಗೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು. ಜಿಲ್ಲಾಡಳಿತವು ಕೂಡಲೇ ಮಧ್ಯಪ್ರವೇಶಿಸಿ ರೈತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ ಕನಿಷ್ಠ ಏಳು ತಾಸು ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು ಮತ್ತು ಕರ್ತವ್ಯ ಲೋಪ ಎಸಗುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಮೂಲಕ ರೈತ ಕುಲವನ್ನು ರಕ್ಷಿಸಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಮನಗುಂಡಿ ಮತ್ತು ಬೆಳ್ಳಿಗಟ್ಟಿ ಗ್ರಾಮದ ನೂರಾರು ರೈತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *