
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಸಿ ಸುಳ್ಳು ವಿಡಿಯೊ ಸೃಷ್ಟಿಸಿ ಪ್ರಸಾರ ಮಾಡಿದ ಆರೋಪ ಎದುರಿಸುತ್ತಿರುವ ಯೂಟ್ಯೂಬರ್ ಸಮೀರ್ ಎಂ.ಡಿ. ಭಾನುವಾರ ಮಧ್ಯಾಹ್ನ 1 ಗಂಟೆಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.
ಸಮೀರ್ ಅವರು ತಮ್ಮ ‘ದೂತ’ ಯೂಟ್ಯೂಬ್ ಚಾನೆಲ್‌ನಲ್ಲಿ, ಧರ್ಮಸ್ಥಳದ ಸುತ್ತಮುತ್ತಲ ಪ್ರದೇಶದಲ್ಲಿ ಹಲವಾರು ಮೃತದೇಹಗಳನ್ನು ಹೂತುಹಾಕಲಾಗಿದೆ ಎಂದು ಕಾಲ್ಪನಿಕ ಮಾಹಿತಿಗಳನ್ನು ಬಿತ್ತರಿಸಿದ್ದರು. ಈ ಸಂಬಂಧ ಜುಲೈ 12ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ನಂತರ ಪೊಲೀಸರು ಸಮೀರ್‌ಗೆ ಮೂರು ಬಾರಿ ನೋಟಿಸ್ ನೀಡಿದ್ದರೂ, ಆತ ವಿಚಾರಣೆಗೆ ಹಾಜರಾಗಿರಲಿಲ್ಲ.
ನಿರೀಕ್ಷಣಾ ಜಾಮೀನು: ಆದೇಶ ಪಾಲನೆ
ಆಗಸ್ಟ್ 21ರಂದು ಧರ್ಮಸ್ಥಳ ಪೊಲೀಸರು ಸಮೀರ್‌ನನ್ನು ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಬಂಧಿಸಲು ಹೋದಾಗ, ಆತ ಮಂಗಳೂರು ನ್ಯಾಯಾಲಯದಿಂದ ಅದೇ ದಿನ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ. ನ್ಯಾಯಾಲಯವು, ‘ವಿಚಾರಣೆಗೆ ಹಾಜರಾಗಬೇಕು ಮತ್ತು ಸಾಕ್ಷಿ ನಾಶ ಮಾಡಬಾರದು’ ಎಂಬ ಷರತ್ತು ವಿಧಿಸಿತ್ತು.
ಈ ಆದೇಶದ ಹೊರತಾಗಿಯೂ ಸಮೀರ್ ವಿಚಾರಣೆಗೆ ಹಾಜರಾಗದ ಕಾರಣ, ಪೊಲೀಸರು ಆತನ ಬಳ್ಳಾರಿ ಮತ್ತು ಬೆಂಗಳೂರಿನ ವಿಳಾಸಗಳಿಗೆ ಮತ್ತೆ ನೋಟಿಸ್ ಜಾರಿ ಮಾಡಿದ್ದರು. ಆದರೆ, ಎರಡೂ ಮನೆಗಳಿಗೆ ಬೀಗ ಹಾಕಲಾಗಿತ್ತು. ಪೊಲೀಸರು ಇ-ಮೇಲ್ ಹಾಗೂ ಮೊಬೈಲ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಲಭಿಸಿರಲಿಲ್ಲ. ಅಂತಿಮವಾಗಿ, ಭಾನುವಾರ ವಿಚಾರಣೆಗೆ ಹಾಜರಾಗಲು ನೀಡಿದ ಸೂಚನೆ ಮೇರೆಗೆ ಸಮೀರ್ ಎಂ.ಡಿ. ಇಂದು ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ.
ಪೊಲೀಸರು ಇದೀಗ ಸಮೀರ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳು ಬಹಿರಂಗಗೊಳ್ಳುವ ಸಾಧ್ಯತೆಯಿದೆ.

