​ಬಾಣಂತಿ ಕೊಲೆ ಪ್ರಕರಣ: ಆರೋಪಿ ಅಮಲ್‌ರಾಜ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೊಳ್ಳೇಗಾಲ ನ್ಯಾಯಾಲಯ

Spread the love

ಹನೂರು: ಕ್ಷುಲ್ಲಕ ಕಾರಣಕ್ಕೆ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆರೋಪಿಗೆ ಕೊಳ್ಳೇಗಾಲದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ಮಂಗಳವಾರ ಆದೇಶ ಹೊರಡಿಸಿದೆ.

ಪ್ರಕರಣದ ಹಿನ್ನೆಲೆ:

ಡಿಸೆಂಬರ್ 23, 2024ರಂದು ಸಂಜೆ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಆರೋಪಿ ಅಮಲ್‌ರಾಜ್ ಬಿನ್ ಥೋಮಸ್ ಎಂಬಾತ ಶೋಭಾ ಎಂಬ ಮಹಿಳೆಯ ಬಳಿ ಮದ್ಯಪಾನಕ್ಕಾಗಿ ಹಣ ಕೇಳಿದ್ದನು. ಹಣ ನೀಡಲು ನಿರಾಕರಿಸಿದಾಗ ಗಲಾಟೆ ಆರಂಭಿಸಿ, ಅವರನ್ನು ಮನೆಯೊಳಗೆ ಎಳೆದುಕೊಂಡು ಹೋಗಿ ಹಲ್ಲೆ ನಡೆಸಿದ್ದನು. ಈ ಬಗ್ಗೆ ಪೊಲೀಸ್ ದೂರು ನೀಡಲು ಶೋಭಾ ಅವರು ಜಮೀನಿನ ಹಾದಿಯಲ್ಲಿ ಹೊರಟಾಗ, ಆರೋಪಿಯು ದೊಣ್ಣೆಯಿಂದ ಹೊಡೆದು ಅವರ ಎಡಮುಂಗೈ ಮುರಿದು, ಬಳಿಕ ಕುತ್ತಿಗೆ ಹಿಸುಕಿ ಬರ್ಬರವಾಗಿ ಕೊಲೆ ಮಾಡಿದ್ದನು. ಕೃತ್ಯದ ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ದೊಣ್ಣೆಯನ್ನು ಮುಳ್ಳಿನ ಪೊದೆಯಲ್ಲಿ ಬಚ್ಚಿಟ್ಟಿದ್ದನು.

ನ್ಯಾಯಾಲಯದ ವಿಚಾರಣೆ:

ರಾಮಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶ್ರೀ ಪಿ.ಎನ್. ಶೇಷಾದ್ರಿ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೊಳ್ಳೇಗಾಲದ ಘನ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಶ್ರೀ ಟಿ.ಸಿ. ಶ್ರೀಕಾಂತ್ ಅವರು, ಆರೋಪಿಯ ಮೇಲಿನ ಕೊಲೆ (103(1) BNS) ಮತ್ತು ಸಾಕ್ಷ್ಯ ನಾಶ (238 BNS) ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

​ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀ ಸಿ.ಬಿ. ಗಿರೀಶ್ ಅವರು ಪ್ರಬಲವಾಗಿ ವಾದ ಮಂಡಿಸಿದ್ದರು. ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸುವ ನಿಟ್ಟಿನಲ್ಲಿ ಇಂತಹ ಗಂಭೀರ ಕೃತ್ಯವೆಸಗುವವರಿಗೆ ಈ ಶಿಕ್ಷೆ ಒಂದು ಎಚ್ಚರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ವರದಿ: ಕಾರ್ತಿಕ್ ಗೌಡ, ಹನೂರು

Leave a Reply

Your email address will not be published. Required fields are marked *