
ಹುಬ್ಬಳ್ಳಿ: ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಹಳೇ ಸಿಎಆರ್ ಮೈದಾನದಲ್ಲಿ ರೌಡಿ ಪರೇಡ್ ನಡೆಸಿ, ರೌಡಿಶೀಟರ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಕಮಿಷನರ್ ಶಶಿಕುಮಾರ್ ಅವರ ಸೂಚನೆಗಳು
- ಕಠಿಣ ಕ್ರಮದ ಎಚ್ಚರಿಕೆ: ಎರಡು ಹಬ್ಬಗಳಿಗೆ ಯಾವುದೇ ತೊಂದರೆ ಮಾಡಿದರೆ ರೌಡಿಗಳಿಗೆ ಗಡಿಪಾರು ಮತ್ತು ಗೂಂಡಾ ಕಾಯ್ದೆಯಂತಹ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಕಾನೂನಿನ ಎಲ್ಲ ಕ್ರಮಗಳನ್ನು ಬಳಸಿ ಜೈಲಿಗಟ್ಟಲಾಗುವುದು ಎಂದು ಆಯುಕ್ತರು ಎಚ್ಚರಿಸಿದರು.
- ರೌಡಿಶೀಟರ್‌ಗಳ ಮೇಲೆ ನಿಗಾ: ಪರೇಡ್‌ಗೆ ಗೈರಾದ ರೌಡಿಶೀಟರ್‌ಗಳನ್ನು ಪೊಲೀಸ್ ಠಾಣೆಗಳಿಗೆ ಕರೆಸಿ ಎಚ್ಚರಿಕೆ ನೀಡಬೇಕು. ದಿನನಿತ್ಯದ ರೌಂಡ್ಸ್ ವೇಳೆ ಅವರ ಮನೆಗಳಿಗೆ ಭೇಟಿ ನೀಡಿ ಚಲನವಲನಗಳ ಮೇಲೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
- ರೌಡಿ ಪಟ್ಟಿಯಿಂದ ಕೈಬಿಡುವುದು: ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಜೀವನ ನಡೆಸಿದರೆ ರೌಡಿ ಪಟ್ಟಿಯಿಂದ ಕೈಬಿಡಲಾಗುವುದು. ಈಗಾಗಲೇ 506 ಜನರನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ಹೊಸದಾಗಿ 101 ಜನರ ಮೇಲೆ ರೌಡಿಶೀಟರ್ ದಾಖಲಿಸಲಾಗಿದೆ ಎಂದು ತಿಳಿಸಿದರು.
- ಸಾರ್ವಜನಿಕ ಸ್ಥಳದಲ್ಲಿ ಸಿಸಿಟಿವಿ: ಮಹಾನಗರದಲ್ಲಿ ಪ್ರಮುಖ ದಿನಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗುವುದು. ಮೆರವಣಿಗೆ ಮಾರ್ಗಗಳಲ್ಲಿ ಈಗಾಗಲೇ ಇರುವ ಸುಮಾರು 6,000 ಸಿಸಿಟಿವಿ ಕ್ಯಾಮೆರಾಗಳಲ್ಲದೆ, ಹೆಚ್ಚುವರಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದರು.
- ಗಣೇಶ ವಿಸರ್ಜನೆಗೆ ಸುರಕ್ಷತಾ ವಲಯ: ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸುವ ಮಹಿಳೆಯರು, ವೃದ್ಧರು ಮತ್ತು ಮಕ್ಕಳಿಗೆ ತೊಂದರೆಯಾಗದಂತೆ 12 ಸುರಕ್ಷತಾ ವಲಯಗಳನ್ನು ಸ್ಥಾಪಿಸಲಾಗುತ್ತದೆ. ಈ ವಲಯಗಳಲ್ಲಿ ಮಹಿಳಾ ಪೊಲೀಸರು, ವೈದ್ಯಕೀಯ ಸಿಬ್ಬಂದಿ ಮತ್ತು ಪ್ರಥಮ ಚಿಕಿತ್ಸಾ ವ್ಯವಸ್ಥೆ ಇರಲಿದೆ.
- ಡಿಜೆ ನಿಷೇಧ: ಡಿಜೆ ಬಳಕೆಗೆ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಮಯ ವಿಸ್ತರಣೆ ಸಾಧ್ಯವಿಲ್ಲ. ಈದ್ಗಾ ಮೈದಾನದಲ್ಲಿ ಸಾಂಪ್ರದಾಯಿಕ ಪದ್ಧತಿಯ ಬಳಕೆ ಹಾಗೂ ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ನಿಷೇಧ ಕ್ರಮಗಳು ಸ್ವಾಗತಾರ್ಹ ಎಂದು ಅವರು ತಿಳಿಸಿದರು.
ಈಗಾಗಲೇ 83 ಜನರನ್ನು ಗಡಿಪಾರು ಮಾಡಲಾಗಿದ್ದು, ನಾಲ್ಕು ಜನರ ಮೇಲೆ ಗೂಂಡಾ ಕಾಯ್ದೆ ದಾಖಲಿಸಲಾಗಿದೆ ಎಂದು ಕಮಿಷನರ್ ಹೇಳಿದರು. ಈ ಸಂದರ್ಭದಲ್ಲಿ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ಸಿ.ಆರ್. ರವೀಶ, ಯಲ್ಲಪ್ಪ, ಕಾಶಪ್ಪನವರ, ಎಸಿಪಿಗಳಾದ ಪ್ರಶಾಂತ ಸಿದ್ದನಗೌಡ, ಶಿವಪ್ರಕಾಶ ನಾಯಕ, ವೀರೇಶ, ಉಮೇಶ ಚಿಕ್ಕಮಠ ಸೇರಿದಂತೆ ವಿವಿಧ ಠಾಣೆಗಳ ಅಧಿಕಾರಿಗಳು ಹಾಜರಿದ್ದರು.

