ಗಣರಾಜ್ಯೋತ್ಸವ: ಸಂವಿಧಾನದ ಆಶಯ ಸಾರುವ ಅರ್ಥಪೂರ್ಣ ಆಚರಣೆಗೆ ಸಜ್ಜಾಗಿ- ಜಿಲ್ಲಾಧಿಕಾರಿ ದಿವ್ಯ ಪ್ರಭು

Spread the love

ಧಾರವಾಡ: ಇದೇ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವವು ಕೇವಲ ಧ್ವಜಾರೋಹಣಕ್ಕೆ ಸೀಮಿತವಾಗಬಾರದು. ಸಂವಿಧಾನದ ಆಶಯಗಳನ್ನು ಸಾರುವ ನಿಟ್ಟಿನಲ್ಲಿ ಅಚ್ಚುಕಟ್ಟಾದ ಹಾಗೂ ಅರ್ಥಪೂರ್ಣ ಆಚರಣೆಗೆ ಜಿಲ್ಲಾಡಳಿತ ಸಜ್ಜಾಗಬೇಕಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

​ಗಣರಾಜ್ಯೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಹಬ್ಬವಾಗಿರುವ ಗಣರಾಜ್ಯೋತ್ಸವದಲ್ಲಿ ಯಾವುದೇ ರೀತಿಯ ಲೋಪದೋಷಗಳಿಗೆ ಅವಕಾಶ ನೀಡಬಾರದು. ಪೊಲೀಸ್, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳು ತಮಗೆ ವಹಿಸಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಹಬ್ಬದ ಪ್ರಯುಕ್ತ ನಗರದ ಪ್ರಮುಖ ವೃತ್ತಗಳು ಮತ್ತು ಸರ್ಕಾರಿ ಕಟ್ಟಡಗಳಿಗೆ ದೀಪಾಲಂಕಾರ ಮಾಡುವುದು ಹಾಗೂ ನಗರದಾದ್ಯಂತ ಸ್ವಚ್ಛತೆಯನ್ನು ಕಾಪಾಡುವುದು ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.

​ಕಾರ್ಯಕ್ರಮದ ರೂಪುರೇಷೆಗಳ ಕುರಿತು ಮಾಹಿತಿ ನೀಡಿದ ಅವರು, ಗಣರಾಜ್ಯೋತ್ಸವದಂದು ಬೆಳಿಗ್ಗೆ 7:30ಕ್ಕೆ ಎಲ್ಲಾ ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಬೇಕು. ನಂತರ ಬೆಳಿಗ್ಗೆ 8:30ರ ವೇಳೆಗೆ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕರು ಹಾಗೂ ಸರ್ಕಾರಿ ನೌಕರರು ಜಮಾವಣೆಗೊಳ್ಳಬೇಕು. ಬೆಳಿಗ್ಗೆ 8:55ಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರು ಕ್ರೀಡಾಂಗಣಕ್ಕೆ ಆಗಮಿಸಲಿದ್ದು, 9 ಗಂಟೆಗೆ ಸರಿಯಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ವಿವಿಧ ದಳಗಳ ವೀಕ್ಷಣೆ ನಡೆಸಲಿದ್ದಾರೆ ಎಂದರು.

​ಬೆಳಿಗ್ಗೆ 9:15ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಜನತೆಗೆ ಗಣರಾಜ್ಯೋತ್ಸವದ ಸಂದೇಶ ನೀಡಲಿದ್ದು, ನಂತರ ವಿವಿಧ ದಳಗಳಿಂದ ಗೌರವ ರಕ್ಷೆ ಸ್ವೀಕರಿಸಲಿದ್ದಾರೆ. ಗೌರವ ರಕ್ಷೆ ನೀಡುವ ವಿದ್ಯಾರ್ಥಿ ಹಾಗೂ ವಿವಿಧ ಇಲಾಖೆಗಳ ದಳಗಳ ಆಯ್ಕೆ ಮತ್ತು ತರಬೇತಿಯನ್ನು ಪೊಲೀಸ್ ಇಲಾಖೆ ನಿರ್ವಹಿಸಲಿದೆ. ಕ್ರೀಡಾಂಗಣದ ಸಿದ್ಧತೆ ಸೇರಿದಂತೆ ಹಂಚಿಕೆ ಮಾಡಲಾದ ವಿವಿಧ ಕಾರ್ಯಗಳನ್ನು ಸಂಬಂಧಪಟ್ಟ ಇಲಾಖೆಗಳು ಸಮರ್ಪಕವಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

​ವೇದಿಕೆಯಲ್ಲಿದ್ದ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಮಾತನಾಡಿ, ಆಚರಣೆಯ ಸಿದ್ಧತೆಗಳ ಕುರಿತು ಸಲಹೆಗಳನ್ನು ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತಿ, ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ, ಮಹಾನಗರ ಪಾಲಿಕೆ, ಶಾಲಾ ಶಿಕ್ಷಣ ಇಲಾಖೆ, ಪದವಿ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *