
ಬೆಂಗಳೂರು: ಕೊಪ್ಪಳ ಜಿಲ್ಲೆಯ ಹಿಟ್ನಾಳ್ ಗ್ರಾಮದಲ್ಲಿ ಇತ್ತೀಚೆಗೆ ನಡೆದ ರೈಲ್ವೆ ಮೇಲ್ಸೇತುವೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಮೇಲೆ ನಡೆದ ಹಲ್ಲೆ ಯತ್ನವನ್ನು ಖಂಡಿಸಿ, ಕೊಪ್ಪಳ ಜಿಲ್ಲಾ ಬಿಜೆಪಿ ನಿಯೋಗವು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DGP) ಅಧಿಕೃತ ದೂರು ಸಲ್ಲಿಸಿದೆ. ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬಸವರಾಜ ದಡೇಸೂಗೂರು ಅವರ ನೇತೃತ್ವದ ನಿಯೋಗವು ಗುರುವಾರ ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಈ ಮನವಿ ಸಲ್ಲಿಸಿತು.
ದೂರಿನ ಸಾರಾಂಶದಂತೆ, ಕಳೆದ ಜನವರಿ 5 ರಂದು ಹಿಟ್ನಾಳ್ ಗ್ರಾಮದ ಬಳಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳಾದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸಂಸದ ಕೆ. ರಾಜಶೇಖರ್ ಹಿಟ್ನಾಳ್ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ಸಮ್ಮುಖದಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಗಲಭೆ ಸೃಷ್ಟಿಸಿದ್ದಾರೆ. ಶಿಷ್ಟಾಚಾರದ ನೆಪವೊಡ್ಡಿ ಕೇಂದ್ರ ಸಚಿವರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೆ, ಸ್ಥಳದಲ್ಲಿದ್ದ ಕುರ್ಚಿ ಹಾಗೂ ಕಲ್ಲುಗಳನ್ನು ತೂರಾಡಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ್ ಮತ್ತು ಶಶಿಲ್ ನಮೋಶಿ ಅವರಿಗೂ ಕಿರುಕುಳ ನೀಡಲಾಗಿದೆ ಎಂದು ದೂರಲಾಗಿದೆ.
ಘಟನಾ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಗಲಭೆ ತಡೆಯುವಲ್ಲಿ ವಿಫಲರಾಗಿದ್ದು, ಕರ್ತವ್ಯಲೋಪ ಎಸಗಿದ್ದಾರೆ ಎಂದು ನಿಯೋಗ ಅಸಮಾಧಾನ ವ್ಯಕ್ತಪಡಿಸಿದೆ. ಜೊತೆಗೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮಟ್ಕಾ, ಗಾಂಜಾ ಮತ್ತು ಮರಳು ಮಾಫಿಯಾ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡರು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ವಿಧಾನಸಭೆ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಮಾಜಿ ಸಚಿವ ಹಾಲಪ್ಪ ಆಚಾರ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ನವೀನ ಗುಳಗಣ್ಣವರ ಮತ್ತು ಬಸವರಾಜ ಕೆ. ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

