
ನವಲಗುಂದ: ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ಆಯೋಜಿಸಲಾಗಿರುವ ‘ಧಾರವಾಡ ಸಂಸದ ಟ್ರೋಫಿ 2025-26’ ಕ್ರೀಡಾ ಮಹೋತ್ಸವಕ್ಕೆ ನವಲಗುಂದ ಪಟ್ಟಣದ ಮಾಡೆಲ್ ಹೈಸ್ಕೂಲ್ ಮೈದಾನ ಸಜ್ಜಾಗಿದೆ. ಜನವರಿ 8 ಮತ್ತು 9 ರಂದು ಎರಡು ದಿನಗಳ ಕಾಲ ನಡೆಯಲಿರುವ ಈ ಕ್ರೀಡಾ ಹಬ್ಬಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಚಾಲನೆ ನೀಡಲಿದ್ದಾರೆ. ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆ ಹಾಗೂ ಕ್ರೀಡಾಂಗಣದ ಭೂಮಿಪೂಜೆ ನೆರವೇರಿಸಿ ಮಾತನಾಡಿದ ನವಲಗುಂದ ಮಂಡಳ ಅಧ್ಯಕ್ಷ ಗಂಗಪ್ಪ ಮನಮಿ ಮತ್ತು ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ ಅವರು, ಯುವಕರಲ್ಲಿ ಕ್ರೀಡೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಲು ಈ ಮಹೋತ್ಸವ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಕ್ರೀಡಾ ಮಹೋತ್ಸವದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಕೋನರೆಡ್ಡಿ, ಮಾಜಿ ಸಚಿವರಾದ ಸಿ.ಸಿ. ಪಾಟೀಲ, ಶಂಕರ ಪಾಟೀಲ ಮುನೇನಕೊಪ್ಪ, ಕೆ. ಎನ್. ಗಡ್ಡಿ ಹಾಗೂ ಮಾಜಿ ಶಾಸಕ ಆರ್. ಬಿ. ಶಿರಿಯಣ್ಣವರ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಅವರ ‘ಖೇಲೋ ಇಂಡಿಯಾ’ ಮತ್ತು ‘ಫಿಟ್ ಇಂಡಿಯಾ’ ಅಭಿಯಾನದ ಭಾಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ 590ಕ್ಕೂ ಹೆಚ್ಚು ತಂಡಗಳು ನೋಂದಣಿ ಮಾಡಿಕೊಂಡಿವೆ. ಜಿದ್ದಾಜಿದ್ದಿನ ಕಾದಾಟಕ್ಕೆ ಸಾಕ್ಷಿಯಾಗಲಿರುವ ಈ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಭಾಗವಹಿಸಲು ಗ್ರಾಮೀಣ ಹಾಗೂ ನಗರ ಭಾಗದ ಕ್ರೀಡಾಪಟುಗಳು ಉತ್ಸುಕರಾಗಿದ್ದು, ಮೈದಾನದಲ್ಲಿ ಈಗಿನಿಂದಲೇ ಕ್ರೀಡಾ ಸಂಭ್ರಮ ಮನೆಮಾಡಿದೆ.
ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿದ್ದು, ಗುಂಪು ಆಟಗಳಾದ ವಾಲಿಬಾಲ್, ಕಬಡ್ಡಿ ಮತ್ತು ಖೋ-ಖೋ ಜೊತೆಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ 100 ಮೀಟರ್, 800 ಮೀಟರ್ ಓಟ, ಎತ್ತರ ಜಿಗಿತ, ಉದ್ದ ಜಿಗಿತ ಹಾಗೂ ಗುಂಡು ಎಸೆತ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ವಯೋಮಿತಿ ಆಧಾರದ ಮೇಲೆ ಜ್ಯೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ದೇಸಿ ಕ್ರೀಡೆಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಕ್ರೀಡಾಂಗಣದ ಭೂಮಿಪೂಜೆಯ ಸಂದರ್ಭದಲ್ಲಿ ರೈತ ಮೋರ್ಚಾ ಉಪಾಧ್ಯಕ್ಷ ಷಣ್ಮುಖ ಗುರಿಕಾರ, ಮುಖಂಡರಾದ ಮಂಜುನಾಥ ಗಣಿ, ಸಿದ್ದನಗೌಡ ಪಾಟೀಲ, ಸಂತೋಷ ಜೀವಗೌಡರ, ದೇವರಾಜ ದಾಡಿಬಾವಿ ಹಾಗೂ ಸಾಯಿಬಾಬ ಆನೆಗುಂದಿ ಸೇರಿದಂತೆ ಹಲವು ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

