
ಧಾರವಾಡ: ಗಾನವಿದೂಷಿ ಪದ್ಮವಿಭೂಷಣ ಪುರಸ್ಕೃತೆ ದಿ. ಗಂಗೂಬಾಯಿ ಹಾನಗಲ್ ಅವರ ಜನ್ಮಸ್ಥಳವಾದ ಧಾರವಾಡದ ಹೊಸಯಲ್ಲಾಪುರ ಓಣಿಯಲ್ಲಿರುವ ‘ಗಂಗೋತ್ರಿ’ ಅಭಿವೃದ್ಧಿಗೆ ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ. ಗಂಗೋತ್ರಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಈ ವಿಷಯ ತಿಳಿಸಿದರು.
ಬುಧವಾರ ಸ್ಥಳೀಯರು, ಜನಪ್ರತಿನಿಧಿಗಳು ಹಾಗೂ ಸಂಗೀತ ಕಲಾವಿದರೊಂದಿಗೆ ಚರ್ಚೆ ನಡೆಸಿದ ಜಿಲ್ಲಾಧಿಕಾರಿಗಳು, ಧಾರವಾಡದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಮೆರೆಸಿದ ಹೆಮ್ಮೆಯ ಪುತ್ರಿ ಗಂಗೂಬಾಯಿ ಅವರನ್ನು ಸ್ಮರಣೀಯಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
“ಸಂಗೀತ, ಸಾಹಿತ್ಯ, ಚಿತ್ರಕಲೆ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಧಾರವಾಡದ ಪ್ರಸಿದ್ಧಿಗೆ ಅನೇಕ ಕಲಾವಿದರು ಕಾರಣರಾಗಿದ್ದಾರೆ. ಅವರ ಸಾಧನೆಯನ್ನು ಸ್ಮರಿಸುವುದು ಮತ್ತು ಮುಂದಿನ ಪೀಳಿಗೆಗೆ ಅದನ್ನು ಮುಂದುವರೆಸಲು ಅವಕಾಶಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದೆ” ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಗಂಗೋತ್ರಿಯನ್ನು ಅಭಿವೃದ್ಧಿಪಡಿಸಲು ಒಂದು ಮುನ್ನೋಟದ ರೂಪರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಸರ್ಕಾರ ಮತ್ತು ಇತರ ಸಂಸ್ಥೆಗಳ ಆರ್ಥಿಕ ನೆರವಿನೊಂದಿಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು. ಪ್ರಸ್ತುತ ಗಂಗೋತ್ರಿಯ ಜಾಗ ಚಿಕ್ಕದಾಗಿರುವುದರಿಂದ, ಅಕ್ಕಪಕ್ಕದ ಖಾಲಿ ಜಾಗೆಗಳನ್ನು ಪಡೆಯುವ ಬಗ್ಗೆ ಅವುಗಳ ಮಾಲೀಕರೊಂದಿಗೆ ಸಂಪರ್ಕಿಸಲಾಗುವುದು ಎಂದು ದಿವ್ಯ ಪ್ರಭು ಹೇಳಿದರು. ಜಾಗದ ಲಭ್ಯತೆ ಅನುಗುಣವಾಗಿ ಉತ್ತಮವಾದ ಸಂಗೀತ ಮತ್ತು ಸಾಂಸ್ಕೃತಿಕ ಭವನವನ್ನು ನಿರ್ಮಿಸಿ ನಿರಂತರವಾಗಿ ಸಂಗೀತ ಪಾಠಶಾಲೆಗಳನ್ನು ನಡೆಸಲಾಗುವುದು ಎಂದರು. ಸ್ಥಳೀಯ ಕಲಾವಿದರ ಸಹಕಾರದೊಂದಿಗೆ ಸಂಗೀತ ಸಭೆಗಳನ್ನು ಆಯೋಜಿಸಿ, ಗಂಗೂಬಾಯಿ ಹಾನಗಲ್ ಅವರ ಕಿರಾಣಾ ಘರಾನಾ ಸಂಗೀತವನ್ನು ಮುಂದುವರೆಸಲು ಆಸಕ್ತರನ್ನು ಪ್ರೋತ್ಸಾಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಶಂಕರ ಬೆಳಕೆ, ಹಿರಿಯ ನ್ಯಾಯವಾದಿ ಅರುಣ ಚರಂತಿಮಠ, ಕಲಾವಿದರಾದ ಪ್ರಸನ್ನ ಗುಡಿ, ಡಾ. ಶಶೀಧರ ನರೇಂದ್ರ, ರಾಘವೇಂದ್ರ ಗುಡಿ, ಸಂಗೀತ ಕಲಾವಿದೆ ಭಾರ್ಗವಿ ಗುಡಿ, ವೀರಣ್ಣ ಪತ್ತಾರ, ಉದಯ ಯಂಡಿಗೇರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

