
ಬೆಂಗಳೂರು: ರಾಜ್ಯದ ಗೃಹ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದ್ದು, ಕಾನೂನು ಸುವ್ಯವಸ್ಥೆ ಕುಸಿತ ಮತ್ತು ಮಾದಕ ವಸ್ತುಗಳ ಜಾಲ ವ್ಯಾಪಕವಾಗಿ ಹರಡುತ್ತಿರುವುದಕ್ಕೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಶಾಸಕ ಡಾ. ಸಿ.ಎನ್. ಅಶ್ವತ್ ನಾರಾಯಣ ಒತ್ತಾಯಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ವ್ಯವಸ್ಥಿತವಾಗಿ ಬೇರೂರಿದ್ದರೂ ಅದನ್ನು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ಅಸಮರ್ಥವಾಗಿದೆ ಎಂದು ಕಿಡಿಕಾರಿದರು. ಮೈಸೂರು ಹಾಗೂ ಕಲಬುರಗಿ ಮುಂತಾದ ನಗರಗಳಲ್ಲಿ ಮಹಾರಾಷ್ಟ್ರ ಪೊಲೀಸರು ಬಂದು ದಾಳಿ ನಡೆಸುತ್ತಿರುವುದು ನಮ್ಮ ರಾಜ್ಯದ ಇಂಟೆಲಿಜೆನ್ಸ್ ಮತ್ತು ಗೃಹ ಇಲಾಖೆಯ ಲಜ್ಜೆಗೆಟ್ಟ ಸ್ಥಿತಿಯನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿದರು.

ಹೊರರಾಜ್ಯದ ಪೊಲೀಸರಿಗೆ ತಿಳಿಯುವ ಮಾಹಿತಿ ನಮ್ಮ ರಾಜ್ಯದ ಪೊಲೀಸರಿಗೆ ಏಕೆ ತಿಳಿಯುತ್ತಿಲ್ಲ? ನಾಲ್ಕು ಹಂತದ ಗುಪ್ತಚರ ವ್ಯವಸ್ಥೆಗಳಿದ್ದರೂ ಡ್ರಗ್ಸ್ ಜಾಲ ಪತ್ತೆಹಚ್ಚುವಲ್ಲಿ ವಿಫಲವಾಗಿರುವುದಕ್ಕೆ ಯಾರು ಹೊಣೆ? ಎಂದು ಅವರು ತೀವ್ರವಾಗಿ ಪ್ರಶ್ನಿಸಿದರು.
ಪೊಲೀಸ್ ಇಲಾಖೆಯ ವರ್ಗಾವಣೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಠಾಣೆಗಳು ಹಾಗೂ ಹುದ್ದೆಗಳು ಮಾರಾಟಕ್ಕೆ ಇಡಲಾಗಿವೆ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳುವ ಆತಂಕದಲ್ಲಿದ್ದರೆ, ಉಪಮುಖ್ಯಮಂತ್ರಿಗಳು ಮುಖ್ಯಮಂತ್ರಿಯಾಗಲು ಕಾರ್ಯತಂತ್ರ ರೂಪಿಸುವುದರಲ್ಲೇ ನಿರತರಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ಇವರ ಅಧಿಕಾರದ ದಾಹದಿಂದಾಗಿ ರಾಜ್ಯದ ಯುವಕರ ಭವಿಷ್ಯ ಅಂಧಕಾರಕ್ಕೆ ದೂಡಲ್ಪಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರದಲ್ಲಿ ಸುದೀರ್ಘ ಅನುಭವವಿರುವವರು ನಡೆಸುತ್ತಿರುವ ಈ ಕಳಪೆ ಮಟ್ಟದ ಆಡಳಿತವು ರಾಜ್ಯದ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎಂದು ಹೇಳಿದ ಅವರು, ಕೋಗಿಲು ಗ್ರಾಮದ ಅಕ್ರಮ ಒತ್ತುವರಿ ತೆರವು ಪ್ರಕರಣದಲ್ಲಿ ಸರ್ಕಾರದ ದ್ವಂದ್ವ ನಿಲುವನ್ನು ತೀವ್ರವಾಗಿ ಟೀಕಿಸಿದರು. ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಆಡಳಿತದಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ ರಾವ್, ರಾಜ್ಯದಲ್ಲಿ ಸಮಗ್ರ ಆಂಟಿ-ಡ್ರಗ್ ಪಾಲಿಸಿ ಹಾಗೂ ಫಾಸ್ಟ್ ಟ್ರ್ಯಾಕ್ ಕೋರ್ಟ್ಗಳ ಕೊರತೆಯಿಂದಾಗಿ ಅಪರಾಧಿಗಳು ಸುಲಭವಾಗಿ ಜಾಮೀನು ಪಡೆದು ಹೊರಬರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡ್ರಗ್ಸ್ ನಿಯಂತ್ರಣಕ್ಕೆ ಶಾಲೆ–ಕಾಲೇಜುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಪಕ ಸಾಮಾಜಿಕ ಜಾಗೃತಿ ಅಗತ್ಯವಿದೆ ಎಂದರು.
ನಾಲ್ಕು ಹಂತದ ಗುಪ್ತಚರ ವ್ಯವಸ್ಥೆಗಳಿದ್ದರೂ ಡ್ರಗ್ಸ್ ಪತ್ತೆಹಚ್ಚುವಲ್ಲಿ ಸರ್ಕಾರ ವಿಫಲವಾಗಿರುವುದು ಉದ್ದೇಶಪೂರ್ವಕ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸರ್ಕಾರ ತಕ್ಷಣವೇ ಸಮರ್ಥರಿಗೆ ದಾರಿ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ್ ಸೇರಿದಂತೆ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

