

ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿರುವ ಆರೋಪ ಮತ್ತು ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಸಂಸ್ಥೆ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಅವರು, ಎರಡು ದಶಕಗಳ ಅವಧಿಯಲ್ಲಿ ಧರ್ಮಸ್ಥಳದಲ್ಲಿ ನಡೆದಿರುವ ಕೊಲೆ, ಅತ್ಯಾಚಾರ ಮತ್ತು ಸಮಾಧಿಗಳ ಆರೋಪಗಳು ‘ಆಧಾರರಹಿತ ಮತ್ತು ಸುಳ್ಳು’ ಎಂದು ಹೇಳಿದ್ದಾರೆ. ಸತ್ಯ ಹೊರಬರಲು ಎಸ್ಐಟಿ ತನಿಖೆಯನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ.
ಆರೋಪಗಳಿಂದ ನೋವಾಗಿದೆ:
“ಈ ಆರೋಪಗಳು ಆಧಾರರಹಿತ ಮತ್ತು ಸುಳ್ಳು. ಸಾಮಾಜಿಕ ಮಾಧ್ಯಮದಲ್ಲಿ ವಿಷಯಗಳನ್ನು ಬಿಂಬಿಸುವ ರೀತಿ ನೈತಿಕವಾಗಿ ತಪ್ಪು, ಇದು ನನಗೆ ನಿಜವಾಗಿಯೂ ನೋವುಂಟು ಮಾಡಿದೆ” ಎಂದು ಹೆಗ್ಗಡೆ ಹೇಳಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ವಿಧಾನಸಭೆಯಲ್ಲಿ ಎಸ್ಐಟಿ ತನಿಖೆಯ ಬಗ್ಗೆ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಗ್ಗಡೆ, “ನಾವು ಮೊದಲ ದಿನವೇ ಎಸ್ಐಟಿಯನ್ನು ಸ್ವಾಗತಿಸಿದ್ದೇವೆ. ಸತ್ಯ ಹೊರಬರಬೇಕು, ಆರೋಪಗಳು ಹಾಗೆಯೇ ಉಳಿಯುವುದು ಸರಿಯಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ”:
“ತನಿಖೆಗಳು ಆದಷ್ಟು ಬೇಗ ಮುಗಿದು ಸಮಸ್ಯೆ ಬಗೆಹರಿಯಬೇಕೆಂದು ನಾವು ಬಯಸುತ್ತೇವೆ. ನಮ್ಮ ಎಲ್ಲಾ ದಾಖಲೆಗಳು ಸಂಪೂರ್ಣವಾಗಿ ಪಾರದರ್ಶಕವಾಗಿವೆ. ಎಸ್ಐಟಿ ಕೂಲಂಕಷವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು” ಎಂದು ವೀರೇಂದ್ರ ಹೆಗ್ಗಡೆ ಒತ್ತಿ ಹೇಳಿದ್ದಾರೆ.
“ಇಲ್ಲಿ ಸತ್ತರೆ ಮೋಕ್ಷ ಎಂಬ ನಂಬಿಕೆ”:
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿರುವುದಾಗಿ ದೂರುದಾರರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಹೆಗ್ಗಡೆ, “ಇದು ಅಸಾಧ್ಯ. ಧರ್ಮಸ್ಥಳದಲ್ಲಿ ಯಾರಾದರೂ ಮೃತಪಟ್ಟರೆ ಅವರಿಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ. ಅಂತಹ ಸಾವುಗಳು ಸಂಭವಿಸಿದಾಗಲೆಲ್ಲಾ ನಾವು ಪಂಚಾಯತ್ಗೆ ಮಾಹಿತಿ ನೀಡುತ್ತಿದ್ದೆವು, ಅವರು ಸರಿಯಾದ ಕ್ರಮಗಳನ್ನು ಕೈಗೊಂಡು ಶವಗಳನ್ನು ವಿಲೇವಾರಿ ಮಾಡುತ್ತಿದ್ದರು” ಎಂದರು.
ಸೌಜನ್ಯಾ ಪ್ರಕರಣ ಮತ್ತು ಆಸ್ತಿಗಳ ಬಗ್ಗೆ ಸ್ಪಷ್ಟನೆ:
ಸೌಜನ್ಯಾ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಮತ್ತೆ ಆಗ್ರಹಿಸುತ್ತಿರುವ ಕುರಿತು ಮಾತನಾಡಿದ ಹೆಗ್ಗಡೆ, “ಅಂತಹ ಘಟನೆ ನಡೆದಾಗ ನಾವು ಸರ್ಕಾರಕ್ಕೆ ಮಾಹಿತಿ ನೀಡಿದ್ದೇವೆ. ನಮ್ಮ ಕುಟುಂಬದ ಸದಸ್ಯರ ಮೇಲಿನ ಆರೋಪಗಳು ಆಧಾರರಹಿತವಾಗಿವೆ. ಅವರು ಆರೋಪಿಸಿರುವ ಸಮಯದಲ್ಲಿ ನಮ್ಮ ಕುಟುಂಬದ ಸದಸ್ಯರು ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿದ್ದರು, ನಾವು ಈ ಬಗ್ಗೆ ದಾಖಲೆಗಳನ್ನು ನೀಡಿದ್ದೇವೆ” ಎಂದರು. ಸಿಬಿಐ ತನಿಖೆಗಳು ಕೂಡಾ ಈ ಹಿಂದೆ ನಡೆದಿವೆ ಎಂದೂ ಅವರು ಗಮನಸೆಳೆದರು.
ಆಸ್ತಿ ದುರುಪಯೋಗದ ಆರೋಪಗಳನ್ನು ನಿರಾಕರಿಸಿದ ಹೆಗ್ಗಡೆ, ತಮ್ಮ ಕುಟುಂಬದ ಆಸ್ತಿ ಬಹಳ ಕಡಿಮೆ ಇದೆ, ಎಲ್ಲಾ ಆಸ್ತಿಗಳು ಟ್ರಸ್ಟ್ ಹೆಸರಿನಲ್ಲಿವೆ ಎಂದು ಹೇಳಿದರು. ಧರ್ಮಾಧಿಕಾರಿ (ದೇವಾಲಯದ ಉಸ್ತುವಾರಿ) ಪ್ರಕಾರ ಟ್ರಸ್ಟ್ ಅನ್ನು ಕುಟುಂಬ ಸದಸ್ಯರು ಪಾರದರ್ಶಕ ರೀತಿಯಲ್ಲಿ ನಿರ್ವಹಿಸುತ್ತಾರೆ.
ವಿವಾದಕ್ಕೆ ರಾಜಕೀಯ ಸ್ಪರ್ಶದ ಕುರಿತ ಪ್ರಶ್ನೆಗೆ, “ಇಲ್ಲ, ನನಗೆ ಹಾಗೆ ಅನಿಸುವುದಿಲ್ಲ. ಎಲ್ಲಾ ಪಕ್ಷದ ನಾಯಕರು ದೇವಾಲಯವನ್ನು ಬೆಂಬಲಿಸಿದ್ದಾರೆ. ಕೆಲವರು ಮಾತ್ರ ದೇವಾಲಯಕ್ಕೆ ದೋಷಾರೋಪಣೆ ಮಾಡಲು ಬಯಸುತ್ತಾರೆ” ಎಂದು ಉತ್ತರಿಸಿದರು. ಧರ್ಮಸ್ಥಳದ ವಿರುದ್ಧ ಪಿತೂರಿ ನಡೆಯುತ್ತಿದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ಅವರು ಸ್ವಾಗತಿಸಿದರು.

