25 ಕೋಟಿ ಮೌಲ್ಯದ KIADB ಜಮೀನು ಲಪಟಾಯಿಸಲು ಯತ್ನ: ಹೆಡ್ ಕಾನ್‌ಸ್ಟೇಬಲ್ ವಿರುದ್ಧ ಎಫ್‌ಐಆರ್ ದಾಖಲು!

Spread the love

ನೆಲಮಂಗಲ, ಡಿ. 14: ಕಾನೂನು ರಕ್ಷಕನೇ ಭಕ್ಷಕನಾಗಲು ಯತ್ನಿಸಿದ ಗಂಭೀರ ಆರೋಪವೊಂದು ನೆಲಮಂಗಲದಲ್ಲಿ ಬೆಳಕಿಗೆ ಬಂದಿದೆ. ಕೋಟಿ ಕೋಟಿ ಬೆಲೆ ಬಾಳುವ ಜಮೀನಿನ ಮೇಲೆ ಕೆಂಗೆಣ್ಣು ಹಾಕಿದ ನೆಲಮಂಗಲ ಗ್ರಾಮಾಂತರ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಗಿರಿಜೇಶ್ ಮತ್ತು ಆತನ ತಂಡದವರು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೂಲ ಮಾಲೀಕರಿಗೆ ತಿಳಿಯದಂತೆ ಬರೋಬ್ಬರಿ 25 ಕೋಟಿ ರೂಪಾಯಿ ಮೌಲ್ಯದ 8 ಎಕರೆ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

​ಈ ಸಂಬಂಧ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಗಿರಿಜೇಶ್ ಸೇರಿದಂತೆ ಮನೋಜ್, ರೋಹಿಣಿ ಸೇರಿ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

​KIADB ಪರಿಹಾರ ಹಣ ಲಪಟಾಯಿಸಲು ಪ್ಲಾನ್

​ಪ್ರಕರಣದ ಮೂಲ ಮಾಲೀಕ ಥಾಂಪಿ ಮ್ಯಾಥ್ಯೂ ಎಂಬುವವರು ಡಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಥಾಂಪಿ ಮ್ಯಾಥ್ಯೂ ಅವರ ಹೆಸರಿನಲ್ಲಿ ದಾಬಸ್‌ಪೇಟೆ ಮಾಚನಹಳ್ಳಿ ಗ್ರಾಮದಲ್ಲಿರುವ 8 ಎಕರೆ ಜಮೀನಿಗೆ ಸಂಬಂಧಿಸಿದಂತೆ ಈ ಅಕ್ರಮ ನಡೆದಿದೆ.

​ಪ್ರಸ್ತುತ ಈ ಜಮೀನನ್ನು ಕೆಐಎಡಿಬಿ (KIADB) ಸ್ವಾಧೀನಪಡಿಸಿಕೊಂಡಿದ್ದು, ಇದರ ಪರಿಹಾರದ ಮೊತ್ತವನ್ನು ಲಪಟಾಯಿಸಲು ಹೆಡ್ ಕಾನ್‌ಸ್ಟೇಬಲ್ ಗಿರಿಜೇಶ್ ಮತ್ತು ಆತನ ತಂಡ ಯೋಜಿಸಿದ್ದಾರೆ ಎಂಬ ಗಂಭೀರ ಆರೋಪವಿದೆ.

​ಪೊಲೀಸಪ್ಪ ಮತ್ತು ತಂಡ ಮೂರ್ನಾಲ್ಕು ಜನರಿಂದ ಒಟ್ಟು ಎಂಟು ಎಕರೆ ಭೂಮಿಯನ್ನು ಮೂಲ ಮಾಲೀಕನಿಗೆ ಗೊತ್ತಿಲ್ಲದೆ ಅಕ್ರಮವಾಗಿ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಜಮೀನು ರಿಜಿಸ್ಟರ್ ಆಗದೇ ಇದ್ದರೂ, ಆರೋಪಿ ಗಿರಿಜೇಶ್ ಹಾಗೂ ಇನ್ನಿಬ್ಬರ ಹೆಸರಿನಲ್ಲಿ ಪಹಣಿ (RTC) ಕೂರಿಸಿ ಅಕ್ರಮವೆಸಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

​ಪ್ರಕರಣವು ಕೋಟ್ಯಂತರ ಮೌಲ್ಯದ ಸರ್ಕಾರಿ ಪರಿಹಾರದ ಹಣ ಲಪಟಾಯಿಸುವ ಪ್ರಯತ್ನಕ್ಕೆ ಸಂಬಂಧಿಸಿರುವುದರಿಂದ, ಈ ಅಕ್ರಮಕ್ಕೆ ಕಾರಣರಾದ ಎಲ್ಲಾ ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ವಿರುದ್ಧ ಸೂಕ್ತ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *