
ಬೆಂಗಳೂರ:ರಾಜ್ಯದಲ್ಲಿ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟಗಳ ಸಮನ್ವಯ ಸಭೆಯು ಶನಿವಾರದಂದು ಬೆಂಗಳೂರಿನ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ನಡೆಯಿತು. ಸಭೆಯ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನ ಕೇವಲ ಕಾಟಾಚಾರಕ್ಕೆ ಮಾತ್ರ ಸೀಮಿತವಾಗಿದೆ. ಅದು 8 ದಿನಕ್ಕಿಂತ ಹೆಚ್ಚು ಕಾಲ ನಡೆಯಲಾರದು ಎಂದು ಟೀಕಿಸಿದರು.
ಹಾಲಿ ಶಾಸಕರು ಮೃತಪಟ್ಟ ಕಾರಣ ಒಂದು ದಿನ ಅಧಿವೇಶನ ನಡೆಯಲಾರದು. ಆಡಳಿತ ಪಕ್ಷ ಕಾಂಗ್ರೆಸ್ ತನ್ನ ಮರ್ಜಿಗೋಸ್ಕರ ಹಾಗೂ ಮಸೂದೆಗಳ ಅಂಗೀಕಾರಕ್ಕೆ ಈ ಅಧಿವೇಶನವನ್ನು ಬಳಸಿಕೊಳ್ಳುತ್ತಿದೆ ಎಂದು ಅಶೋಕ್ ದೂರಿದರು. ಪ್ರಮುಖವಾಗಿ ಬೆಂಗಳೂರು ಅಭಿವೃದ್ಧಿ ಹಾಗೂ ಬೆಂಗಳೂರು ಪಾಲಿಕೆ ಕುರಿತ ವಿಚಾರಗಳನ್ನೇ ಕೈಗೆತ್ತಿಕೊಳ್ಳಲಾಗುತ್ತಿದೆ. ಬೆಂಗಳೂರಿನ ವಿಚಾರಗಳನ್ನೇ ಚರ್ಚಿಸುವುದಾದರೆ, ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಸುವ ಔಚಿತ್ಯವೇನು ಎಂದು ಪ್ರಶ್ನಿಸಿದರು. ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡುತ್ತಿದ್ದರು. ಈಗಿನ ಸರ್ಕಾರ ಕನಿಷ್ಠ 20 ದಿನಗಳಾದರೂ ಬೆಳಗಾವಿಯಲ್ಲಿ ಅಧಿವೇಶನ ನಡೆಸಿ ಅಲ್ಲಿನ ಸಮಸ್ಯೆಗಳನ್ನು ಚರ್ಚಿಸಬೇಕು ಎಂದು ಅವರು ಆಗ್ರಹಿಸಿದರು.
ಉತ್ತರ ಕರ್ನಾಟಕಕ್ಕೆ ಮೋಸ, ಭ್ರಷ್ಟಾಚಾರದ ಆರೋಪ:
ಉತ್ತರ ಕರ್ನಾಟಕದ ವಿಚಾರವನ್ನು ಸರ್ಕಾರ ಕೊನೆಗೆ ಪರಿಗಣಿಸಿ ನಿರ್ಲಕ್ಷಿಸುತ್ತದೆ. ಮುಖ್ಯಮಂತ್ರಿಗಳು ಕೊನೆಯಲ್ಲಿ ತಿಪ್ಪೆಸಾರಿಸಿ ಭಾಷಣ ಮಾಡಿ ಹೋಗಿದ್ದರು. ಕೈಗಾರಿಕೆ ಸ್ಥಾಪನೆ, ಶಾಲಾರಂಭ, ನೀರಾವರಿ ಯೋಜನೆಗೆ ಹಣ ನೀಡುವ ವಿಚಾರದಲ್ಲಿ ಸರ್ಕಾರ ಮೋಸ ಮಾಡಿದೆ ಎಂದು ದೂರಿದರು. ತುಂಗಭದ್ರಾ ಡ್ಯಾಂ ಗೇಟ್ ಕಿತ್ತು ಹೋಗಿ ಒಂದು ವರ್ಷವಾದರೂ ₹12 ಕೋಟಿ ನೀಡುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ ಎಂದು ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು.
ಸರಕಾರ ಸಂಪೂರ್ಣ ತಪ್ಪು ಹಾದಿಯಲ್ಲಿದೆ. ಜನರಿಗೆ ನೀಡಿದ ಭರವಸೆಗಳಿಗೆ ವಿರುದ್ಧವಾಗಿ ನಡೆಯುತ್ತಿದೆ. ಕಾಂಗ್ರೆಸ್ ಸರಕಾರವು ಶೇ. 60 ಕಮಿಷನ್ ಸರಕಾರವಾಗಿ ಮಾರ್ಪಟ್ಟಿದೆ. ಕರ್ನಾಟಕವನ್ನು ಎಟಿಎಂ ಮಾಡಿಕೊಂಡು ಕಾಂಗ್ರೆಸ್ಸಿನ ಕೇಂದ್ರ ಹೈಕಮಾಂಡ್‌ಗೆ ಹಣ ಕಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ವಿರುದ್ಧ ಎರಡೂ ಪಕ್ಷಗಳು ಹೋರಾಟ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.

ಸಮನ್ವಯತೆ ಮತ್ತು ಮೈತ್ರಿ ಬಲ:
ಎನ್‍ಡಿಎ ಅಂಗ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಈ ಹಿಂದಿನ ಅಧಿವೇಶನಗಳಲ್ಲೂ ಒಟ್ಟಾಗಿ ಕೆಲಸ ಮಾಡಿವೆ. ಮುಡಾ ಹಗರಣ, ನಿವೇಶನ ವಾಪಸಾತಿ, ವಾಲ್ಮೀಕಿ ನಿಗಮದ ಹಗರಣದಲ್ಲಿ ಮಂತ್ರಿ ರಾಜೀನಾಮೆ ವಿಚಾರ, ಕ್ರಿಕೆಟ್ ಸ್ಟೇಡಿಯಂನಲ್ಲಿ ಅಮಾಯಕ 11 ವಿದ್ಯಾರ್ಥಿಗಳ ದುರ್ಮರಣ- ಇಂತಹ ಎಲ್ಲಾ ವಿಚಾರಗಳಲ್ಲಿ ನಮ್ಮ ಶಾಸಕರು ಮತ್ತು ಮೇಲ್ಮನೆ ಸದಸ್ಯರು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ ಎಂದು ವಿವರಿಸಿದರು.
ವಿಧಾನಸಭೆಗೆ ಸಂಬಂಧಿಸಿದ 10-12 ವಿಚಾರಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದ್ದು, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸಭೆಗೆ ಬಂದು ಮಾರ್ಗದರ್ಶನ ನೀಡಿದ್ದಾರೆ. ಅದೇರೀತಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಫೋನ್ ಕರೆ ಮಾಡಿ ಸಲಹೆಗಳನ್ನು ನೀಡಿದ್ದಾರೆ. ಅವೆಲ್ಲವುಗಳನ್ನು ಪರಿಗಣಿಸಿ ಅಧಿವೇಶನದಲ್ಲಿ ಹೋರಾಟ ನಡೆಸಲಾಗುವುದು ಎಂದು ಆರ್. ಅಶೋಕ್ ತಿಳಿಸಿದರು.
ಉತ್ತರ ಕರ್ನಾಟಕ ಸಮಸ್ಯೆಗಳೇ ಪ್ರಮುಖ: ಕೇಂದ್ರ ಸಚಿವ ಕುಮಾರಸ್ವಾಮಿ
ಸಭೆಯ ಬಳಿಕ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಅಧಿವೇಶನ ಕಾಟಾಚಾರದ್ದು ಎಂಬ ಭಾವನೆ ದೂರ ಮಾಡುವ ದೃಷ್ಟಿಯಿಂದ ಮೊದಲ ದಿನದಿಂದ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನೇ ಪ್ರಮುಖವಾಗಿ ತೆಗೆದುಕೊಳ್ಳಬೇಕೆಂದು ಇವತ್ತಿನ ಸಮನ್ವಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಯಾದಗಿರಿ, ಕಲಬುರಗಿ, ಬೀದರ್, ಬಾಗಲಕೋಟೆ, ವಿಜಯಪುರ, ಬೆಳಗಾವಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇತ್ತು. ಈ ವಿಷಯದಲ್ಲಿ ಸರ್ಕಾರ ಮೂರ್ನಾಲ್ಕು ತಿಂಗಳಾದ ಬಳಿಕ ನಿದ್ದೆಯಿಂದ ಎದ್ದೇಳುತ್ತಿದೆ ಎಂದು ದೂರಿದರು. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಸಮನ್ವಯದಿಂದ ಕಾರ್ಯ ನಿರ್ವಹಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

