ಅತಿವೃಷ್ಟಿಯಿಂದ ಬೆಳೆಹಾನಿ: ಹಾನಿಗೊಳಗಾದ ಬೆಳೆ ಸಮೇತ ಸಚಿವರಿಗೆ ರೈತರಿಂದ ಮನವಿ

Spread the love

ಹುಬ್ಬಳ್ಳಿ: ಮುಂಗಾರು ಹಂಗಾಮಿನಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ಬೆಳೆಗಳು ಸಂಪೂರ್ಣ ನಾಶವಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರು, ತಮ್ಮ ಹಾನಿಗೊಳಗಾದ ಬೆಳೆಗಳನ್ನೇ ಹೊತ್ತು ತಂದು ನೇರವಾಗಿ ಸಚಿವರಿಗೆ ಮನವಿ ಸಲ್ಲಿಸಿದ ಘಟನೆ ವರದಿಯಾಗಿದೆ. ಹುಬ್ಬಳ್ಳಿ ತಾಲ್ಲೂಕಿನ ಚಬ್ಬಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ಗಮನಕ್ಕೆ ರೈತರು ಈ ಸಮಸ್ಯೆ ತಂದಿದ್ದಾರೆ.

ರೈತ ಸಂಘದ ನೇತೃತ್ವದಲ್ಲಿ ಮನವಿ:
ರೈತರಿಗಾದ ನಷ್ಟವನ್ನು ಕಣ್ಣಾರೆ ನೋಡುವಂತೆ ಮಾಡಲು, ರತ್ನ ಭಾರತ ರೈತ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷ ಹೇಮನಗೌಡ ಬಸನಗೌಡ ಅವರ ನೇತೃತ್ವದಲ್ಲಿ ಸಂಘದ ರೈತರು ಈ ವಿಶಿಷ್ಟ ನಮವಿ ಪ್ರದರ್ಶಿಸುವ ಮೂಲಕ ಗಮನ ಹರಿಸಿದರು. ಹಾನಿಗೊಳಗಾದ ಶೇಂಗಾ, ಹೆಸರು, ಬಿಟಿ ಹತ್ತಿ, ಸೋಯಾಬಿನ್ ಮತ್ತು ಇತರ ವಾಣಿಜ್ಯ ಬೆಳೆಗಳನ್ನೇ ಸಚಿವರ ಎದುರು ಪ್ರದರ್ಶಿಸಿ, ತೀವ್ರ ಬೆಳೆಹಾನಿಯ ಕುರಿತು ಮನವಿ ಸಲ್ಲಿಸಿದರು. ಸಚಿವರು ರೈತರು ತಂದಿದ್ದ ಬೆಳೆಗಳ ಮಾದರಿಯನ್ನು ಪರಿಶೀಲಿಸಿದರು.

ರೈತರ ಅಳಲು:
“ಮುಂಗಾರು ಮಳೆ ಆರಂಭದಲ್ಲಿ ವಿಳಂಬವಾಗಿತ್ತು. ನಂತರ ಸುರಿದ ಅಕಾಲಿಕ ಮಳೆಯಿಂದ ಹೊಲ ಗದ್ದೆಗಳಲ್ಲಿ ನೀರು ನಿಂತು ಬಿತ್ತನೆ ಮಾಡಿದ್ದ ಬೆಳೆಗಳು ಸಂಪೂರ್ಣ ಕೊಳೆತು ಹೋಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬೀಜ, ರಸಗೊಬ್ಬರ ಮತ್ತು ಕೂಲಿಗಾಗಿ ಮಾಡಿರುವ ಸಾಲದಿಂದ ನಾವು ತೀವ್ರ ಸಂಕಷ್ಟದಲ್ಲಿದ್ದೇವೆ. ಕೂಡಲೇ ಸರ್ಕಾರ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ಘೋಷಿಸಬೇಕು” ಎಂದು ಹೇಮನಗೌಡ ಬಸನಗೌಡ ಅವರು ಸಚಿವರಲ್ಲಿ ಆಗ್ರಹಿಸಿದರು.

ಸಚಿವರ ಭರವಸೆ:
ರೈತರ ಮನವಿಯನ್ನು ಸ್ವೀಕರಿಸಿದ ಸಚಿವ ಸಂತೋಷ್ ಲಾಡ್, “ಅತಿವೃಷ್ಟಿಯಿಂದ ಬೆಳೆಹಾನಿಯಾದ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆ. ರೈತರ ಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತದೆ. ನಷ್ಟದ ಕುರಿತು ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಸಮೀಕ್ಷಾ ವರದಿ ಬಂದ ನಂತರ ಸರ್ಕಾರ ಸೂಕ್ತ ಪರಿಹಾರವನ್ನು ಒದಗಿಸಲು ಕ್ರಮ ಕೈಗೊಳ್ಳುತ್ತದೆ” ಎಂದು ಭರವಸೆ ನೀಡಿದರು.ರೈತರು ತಮ್ಮ ಸಮಸ್ಯೆಗಳನ್ನು ನೇರವಾಗಿ ಸಚಿವರ ಗಮನಕ್ಕೆ ತಂದ ಈ ಕ್ರಮವು ಎಲ್ಲರ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ರತ್ನ ಭಾರತ ರೈತ ಸಮಾಜದ ತಾಲ್ಲೂಕು ಅಧ್ಯಕ್ಷ ಬಸವರಾಜ ಯೋಗಪ್ಪನವರ, ಸಂಘದ ಸದಸ್ಯರಾದ ಸಕ್ರಪ್ಪ ಕಮ್ಮಾರ, ಮಂಜುನಾಥ ಮಲ್ಲಿಗವಾಡ, ಖಾದರ್ ಸಾಬ್ ನದಾಫ್ ಮತ್ತು ಮಲ್ಲಿಕಾರ್ಜುನ ಗೌಡ ಖಾನಗೌಡ್ರ ಸೇರಿದಂತೆ ಹಲವಾರು ರೈತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *