
ಉಡುಪಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (ನವೆಂಬರ್ 28) ಉಡುಪಿಗೆ ಭೇಟಿ ನೀಡಲಿದ್ದು, ‘ಲಕ್ಷ ಕಂಠ ಗೀತ ಪಾರಾಯಣ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿಯವರ ಭೇಟಿ ಹಾಗೂ ಬೃಹತ್ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ನಗರ ಮತ್ತು ಸುತ್ತಮುತ್ತಲಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಪ್ರಧಾನಿ ಮೋದಿ ಅವರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಬೃಹತ್ ರೋಡ್ ಶೋ ಸಹ ನಡೆಯಲಿದ್ದು, ಇದರಲ್ಲಿ 30,000ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ.
ರೋಡ್ ಶೋ ಮತ್ತು ಪ್ರಧಾನಿಯವರ ಇತರೆ ಕಾರ್ಯಕ್ರಮಗಳ ಕಾರಣದಿಂದ ಶಾಲಾ ಮಕ್ಕಳ ವಾಹನ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಮಕ್ಕಳ ಸುರಕ್ಷತೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಉಡುಪಿ ನಗರ ಠಾಣೆ, ಮಲ್ಪೆ ಠಾಣಾ ವ್ಯಾಪ್ತಿ ಮತ್ತು ಮಣಿಪಾಲ್ ಠಾಣಾ ವ್ಯಾಪ್ತಿಯಲ್ಲಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನವೆಂಬರ್ 28ರಂದು ರಜೆ ಘೋಷಿಸಲಾಗಿದೆ.

