
ಅಸಮಾನತೆ ನಿವಾರಣೆಗಾಗಿಯೇ ಸರ್ಕಾರದಿಂದ ‘ಭಾಗ್ಯ’ ಮತ್ತು ‘ಗ್ಯಾರಂಟಿ’ ಯೋಜನೆಗಳ ಜಾರಿ; ವಸಂತನಗರದಲ್ಲಿ ಸಂವಿಧಾನ ದಿನಾಚರಣೆ
ಬೆಂಗಳೂರು: ನವೆಂಬರ್ 26: ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನಕ್ಕೆ ಮೊದಲು ದೇಶದಲ್ಲಿ ಅಲಿಖಿತ ಮನುಸ್ಮೃತಿ ಜಾರಿಯಲ್ಲಿತ್ತು. ಮನುಷ್ಯ ವಿರೋಧಿ ಮತ್ತು ಸಮಾನತೆ ವಿರೋಧಿ ನಿಯಮಗಳಿದ್ದ ಮನುಸ್ಮೃತಿಯ ಆಶಯಗಳಿಗೆ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಅವಕಾಶ ಇಲ್ಲದಂತಾಗಿದೆ. ಅದಕ್ಕಾಗಿಯೇ ಮನುವಾದಿಗಳು ನಮ್ಮ ಸಂವಿಧಾನವನ್ನು ವಿರೋಧಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಬುದುವಾರದಂದು (ನ.26) ವಸಂತನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ “ಸಂವಿಧಾನ ದಿನಾಚರಣೆ – 2025” ಅನ್ನು ಉದ್ಘಾಟಿಸಿ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬರಿಗೆ ನಮಿಸಿ ಮಾತನಾಡಿದರು.
ಸಂವಿಧಾನದ ಮೂಲ ಮಂತ್ರ ಮತ್ತು ಆಶಯ:
ಸಮಸಮಾಜ ನಿರ್ಮಾಣ ಮತ್ತು ಅಸಮಾನತೆ ನಿವಾರಣೆ ನಮ್ಮ ಸಂವಿಧಾನ ಹಾಗೂ ಡಾ. ಅಂಬೇಡ್ಕರ್ ಅವರ ಪ್ರಮುಖ ಆಶಯವಾಗಿತ್ತು. “We the people of INDIA” ಎನ್ನುವುದೇ ನಮ್ಮ ಸಂವಿಧಾನದ ಮೂಲ ಮಂತ್ರವಾಗಿದೆ. ಈ ದೇಶದ ಜನತೆಗೆ ಎಂತಹ ಸಂವಿಧಾನ ಬೇಕು ಎನ್ನುವ ಬಗ್ಗೆ ಒಂದು ವರ್ಷ ಕಾಲ ಸಂವಿಧಾನ ಸಭೆಯಲ್ಲಿ ಸಮಗ್ರ ಚರ್ಚೆ ನಡೆದ ಬಳಿಕ ಸಂವಿಧಾನ ಅಂಗೀಕರಿಸಲಾಗಿದೆ ಎಂದು ತಿಳಿಸಿದರು.
ವಿಶ್ವದಲ್ಲಿ ಫೆಡರಲ್, ಯೂನಿಟರಿ, ಲಿಖಿತ (ರಿಟರ್ನ್), ಅಲಿಖಿತ (ಅನ್ ರಿಟರ್ನ್) ಸಂವಿಧಾನಗಳಿವೆ. ನಮ್ಮದು ಲಿಖಿತ ಸಂವಿಧಾನ. ನಮ್ಮ ದೇಶದಲ್ಲಿರುವಷ್ಟು ಜಾತಿ, ಧರ್ಮಗಳು ಬೇರೆ ಯಾವ ದೇಶದಲ್ಲೂ ಇಲ್ಲ. ಹೀಗಾಗಿ ಈ ನೆಲಕ್ಕೆ ಒಪ್ಪಿಗೆಯಾಗುವಂತಹ ಶ್ರೇಷ್ಠ ಸಂವಿಧಾನವನ್ನು ಡಾ. ಅಂಬೇಡ್ಕರ್ ಅವರು ಕೊಟ್ಟರು ಎಂದು ಅವರು ಹೇಳಿದರು. ಮನುವಾದಿಗಳು ಸಂವಿಧಾನ ರಚನೆಯು ಅಂಬೇಡ್ಕರ್ ಅವರಿಂದ ಆಗಿಲ್ಲ ಎಂದು ವಾದಿಸಿದರೂ, ಅವರೇ ಸಂವಿಧಾನ ಶಿಲ್ಪಿ ಎನ್ನುವುದನ್ನು ಮರೆಯಬಾರದು. ಈ ದೇಶದ ಜಾತಿ ವ್ಯವಸ್ಥೆ ಮತ್ತು ಅದರ ಅಪಾಯಗಳು ಅಂಬೇಡ್ಕರ್ ಅವರಿಗೆ ಚೆನ್ನಾಗಿ ಅರ್ಥವಾಗಿದ್ದರಿಂದಲೇ ನಮ್ಮ ಸಂವಿಧಾನದಲ್ಲಿ ಮೀಸಲಾತಿಯನ್ನು ಸೇರಿಸಿದರು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಜಾತಿ ವ್ಯವಸ್ಥೆ ಮತ್ತು ಆರ್ಥಿಕ ಶಕ್ತಿ:
ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವು ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವೂ ಪೂರ್ಣವಾಗಿ ಈಡೇರಿಲ್ಲ. ಬಸವಣ್ಣನವರಾದಿಯಾಗಿ ಎಲ್ಲಾ ಮಹಾತ್ಮರು ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದರೂ ಪಟ್ಟಭದ್ರ ಹಿತಾಸಕ್ತಿಗಳು ಜಾತಿ ಹೋಗಲು ಬಿಡುತ್ತಿಲ್ಲ. ಕೆಳ ಜಾತಿಯ ಶೂದ್ರ ವರ್ಗದವರಿಗೆ ಆರ್ಥಿಕ ಶಕ್ತಿ ಬಂದಾಗ ಮಾತ್ರ ಜಾತಿ ವ್ಯವಸ್ಥೆ ದುರ್ಬಲವಾಗುತ್ತದೆ ಎಂದು ಅವರು ಹೇಳಿದರು.
ಅಸಮಾನತೆ ಇರುವ ದೇಶದಲ್ಲಿ ಸಮಾನತೆ ಸುಲಭವಾಗಿ ಬರುವುದಿಲ್ಲ. ದಲಿತರನ್ನು, ಶೂದ್ರರನ್ನು, ಹಿಂದುಳಿದವರನ್ನು, ಮುಸ್ಲಿಮರನ್ನು, ಅಲ್ಪಸಂಖ್ಯಾತರನ್ನು ದ್ವೇಷಿಸಿ ಎಂದು ನಮ್ಮ ಧರ್ಮವೂ ಹೇಳುವುದಿಲ್ಲ, ಯಾವ ಧರ್ಮವೂ ಹೇಳುವುದಿಲ್ಲ ಎಂದರು. ಸಂವಿಧಾನ ಅಂಗೀಕಾರಕ್ಕೆ 285 ಸದಸ್ಯರಲ್ಲಿ 284 ಮಂದಿ ಪೂರ್ಣ ಸಹಿ ಹಾಕಿದರು. ಒಬ್ಬರು ಮಾತ್ರ ಹಾಕಲಿಲ್ಲ. ಹೀಗಾಗಿ ಬಹುತೇಕ ಎಲ್ಲರಿಗೂ ಒಪ್ಪಿಗೆ ಆಗುವಂತಹ ಸಂವಿಧಾನವನ್ನು ಅಂಬೇಡ್ಕರ್ ರಚಿಸಿದರು ಎಂದು ವಿವರಿಸಿದರು.
ಸಮಾನತೆಗಾಗಿ ‘ಭಾಗ್ಯ’ ಮತ್ತು ‘ಗ್ಯಾರಂಟಿ’ ಯೋಜನೆಗಳು:
ಸಂವಿಧಾನದ ಸಮಾನತೆಯ ಆಶಯವನ್ನು ಈಡೇರಿಸುವ ಸಲುವಾಗಿಯೇ ತಾವು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಹಲವು ಭಾಗ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲಾಗಿತ್ತು. ಈಗ ಜಾರಿ ಮಾಡಿರುವ ಐದೂ ಗ್ಯಾರಂಟಿಗಳ ಹಿಂದೆ ಅಸಮಾನತೆ ನಿವಾರಿಸುವ ಮತ್ತು ಸರ್ವರಿಗೂ ಆರ್ಥಿಕ ಶಕ್ತಿ ಬರಲಿ ಎನ್ನುವ ಆಶಯ ಇದೆ ಎಂದು ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಹೆಚ್.ಸಿ. ಮಹದೇವಪ್ಪ, ಕೆ.ಹೆಚ್. ಮುನಿಯಪ್ಪ, ಎಂ.ಸಿ. ಸುಧಾಕರ್, ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ, ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ವಿವಿಧ ನಿಗಮಗಳ ಅಧ್ಯಕ್ಷರು, ಸದಸ್ಯರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

