ಧರ್ಮಸ್ಥಳ ಪ್ರಕರಣ: ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ; ‘ಕಾಡು ನಕ್ಸಲರಿಗೆ ಮುಖ್ಯಮಂತ್ರಿ ಬೆಂಬಲ’ – ಆರ್. ಅಶೋಕ್

Spread the love

ಹುಬ್ಬಳ್ಳಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿ ತಾಲ್ಲೂಕಿನ ವರೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಇಬ್ಬರೂ ನಾಯಕರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.

ದೇಶದ ಗುಡಿ-ಗುಂಡಾರ ಒಡೆಯುವ ಪ್ರಯತ್ನ’: ಪ್ರಲ್ಹಾದ್ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, “ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇವರು ದೇಶದ ದೇವಾಲಯಗಳನ್ನು ಒಡೆಯುವ ಪ್ರಯತ್ನ ಮಾಡಿದ್ದಾರೆ. ಮುಸ್ಲಿಂ ಲೀಗ್ ಸೇರಿದಂತೆ ಹಲವು ಸಂಘಟನೆಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಯಾರೋ ಒಬ್ಬ ಅಯೋಗ್ಯ ಹೇಳಿದ್ದಕ್ಕೆ ಎಸ್‌ಐಟಿ ರಚನೆ ಮಾಡುತ್ತೀರಿ ಎಂದರೆ ನೀವು ಎಷ್ಟು ಮೂರ್ಖರಿರಬಹುದು” ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಧರ್ಮಸ್ಥಳ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ಷಡ್ಯಂತ್ರ’ ಎಂದು ಹೇಳಿದ್ದಾರೆ. ಆದರೆ, ಕೇಸ್ ದಾಖಲಿಸಿ ತನಿಖೆ ಮಾಡಲಾಗುತ್ತದೆ. ಪೊಲೀಸರನ್ನು ಕಳ್ಳರನ್ನಾಗಿ ಮಾಡುತ್ತಾರೆ. ಕೆಫೆ ಬ್ಲಾಸ್ಟ್ ಆದಾಗ ಅದು ಭಯೋತ್ಪಾದನಾ ಕೃತ್ಯ ಅಲ್ಲ ಎಂದು ಹೇಳಿದಿರಿ. ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರದ ಬಗ್ಗೆ ಅತ್ಯಂತ ಅಸಭ್ಯವಾಗಿ ಮಾತನಾಡಿದರೂ ಇದುವರೆಗೂ ಕ್ರಮ ಏಕೆ ಕೈಗೊಂಡಿಲ್ಲ ಎಂದು ಜೋಶಿ ಪ್ರಶ್ನಿಸಿದರು.

ಕಾಂಗ್ರೆಸ್ ಆಳಲು ಲಾಯಕ್ ಇಲ್ಲ’: ಜೋಶಿ
ಆರ್‌ಎಸ್‌ಎಸ್‌ನ ಪಾತ್ರದ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಶಿ, “ಅವರಿಗೆ ಇತಿಹಾಸ ಗೊತ್ತಿಲ್ಲ. ಇದು ನಿಜವಾದ ಕಾಂಗ್ರೆಸ್ ಅಲ್ಲ, ನುಸುಳುಕೋರರು ಮೂಲ ಕಾಂಗ್ರೆಸ್ ಅನ್ನು ಕಬಳಿಸಿದ್ದಾರೆ. ಕಾಂಗ್ರೆಸ್‌ನವರು ಆಡಳಿತ ನಡೆಸಲು ಲಾಯಕ್ ಇಲ್ಲ. ಮುಖರ್ಜಿ ಅವರು ಬಲಿದಾನ ಮಾಡಿದರು, ವಲ್ಲಭಭಾಯಿ ಪಟೇಲ್, ಸುಭಾಸ್ ಚಂದ್ರ ಬೋಸ್ ಅವರನ್ನು ಯಾವ ರೀತಿ ನಡೆಸಿಕೊಂಡರು ಎಂಬುದು ಎಲ್ಲರಿಗೂ ಗೊತ್ತು. ಇಂದಿರಾ ಗಾಂಧಿಗಿಂತ ಹತ್ತು ಪಟ್ಟು ಹೆಚ್ಚು ತ್ಯಾಗ ಮಾಡಿದ ಅಂಬೇಡ್ಕರ್ ಅವರ ಯೋಜನೆಗಳನ್ನು ಅವರ ಹೆಸರುಗಳೊಂದಿಗೆ ಇಟ್ಟಿಲ್ಲ” ಎಂದು ಕುಟುಕಿದರು.

ಸರ್ಕಾರಕ್ಕೆ ಮತಾಂದರ ಬೆಂಬಲ’: ಆರ್. ಅಶೋಕ್
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, “ರಾಜ್ಯದಲ್ಲಿ ಪದೇ ಪದೇ ಹಿಂದೂ ಧರ್ಮಕ್ಕೆ ಅವಮಾನ ಮಾಡುವ ಕೆಲಸ ನಡೆಯುತ್ತಿದೆ. ಜೆಸಿಬಿಯನ್ನು ಧರ್ಮಸ್ಥಳದ ಹೆಬ್ಬಾಗಿಲಿಗೆ ನುಗ್ಗಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಮತಾಂದರು ಮತ್ತು ನಗರ ನಕ್ಸಲರು ಕಾಡು ಬಿಟ್ಟು ನಾಡಿಗೆ ಬಂದಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಟಿಪ್ಪು ಪ್ರೇರಿತ ಗ್ಯಾಂಗ್‌ಗೆ ಬೆಂಬಲ ನೀಡುತ್ತಿದೆ” ಎಂದು ಗಂಭೀರ ಆರೋಪ ಮಾಡಿದರು.
“ಯೂಟ್ಯೂಬರ್ ಸಮೀರ್, ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರು ಮುಖ್ಯಮಂತ್ರಿ ಕಚೇರಿಯ ಸುತ್ತಲೇ ಓಡಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಷಡ್ಯಂತ್ರವಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ, ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಯಲ್ಲಿ ಈ ಬಗ್ಗೆ ಒಂದು ಮಾತು ಬಂದಿದೆಯೇ? ಕಾಂಗ್ರೆಸ್‌ನಲ್ಲಿ ಹಿಂದೂ ವಿರೋಧಿ ಮತ್ತು ಹಿಂದೂ ಪರ ಗುಂಪುಗಳ ನಡುವೆ ಒಡಕಿದೆ” ಎಂದು ಹೇಳಿದರು.

ಷಡ್ಯಂತ್ರ ಮಾಡಿದವರ ಮೇಲೆ ಕ್ರಮ ಆಗಲಿ’: ಗುಣಧರನಂದಿ ಶ್ರೀಗಳು
ಇದೇ ಸಂದರ್ಭದಲ್ಲಿ ಮಾತನಾಡಿದ ನವಗ್ರಹ ತೀರ್ಥ ಕ್ಷೇತ್ರದ ಗುಣಧರನಂದಿ ಶ್ರೀಗಳು, “ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ರಚನೆ ಒಳ್ಳೆಯದು, ಸತ್ಯ ಹೊರಬರಲಿದೆ. ಆದರೆ, ಷಡ್ಯಂತ್ರ ಮಾಡಿದವರ ಮೇಲೆ ತಕ್ಷಣ ಕ್ರಮ ಆಗಬೇಕು. ಒಬ್ಬ ಭಯೋತ್ಪಾದಕ ಕೂಡ 300 ಕೊಲೆ ಮಾಡಲಾಗಲ್ಲ. ಅಂತಹದರಲ್ಲಿ ಇಂತಹ ವ್ಯಕ್ತಿಯ ಮೇಲೆ ಆರೋಪ ಮಾಡುತ್ತಾರೆ. ಆರೋಪ ಮಾಡಿದವರ ಮೇಲೂ ತನಿಖೆ ನಡೆಯಬೇಕು. ಅಧಿವೇಶನದಲ್ಲಿ ಯೂಟ್ಯೂಬರ್‌ಗಳ ಮೇಲೆ ಕ್ರಮ ಕೈಗೊಳ್ಳಲು ನಿಯಮ ರೂಪಿಸಬೇಕು. ನಮ್ಮ ಧರ್ಮಾತ್ಮನ ಮೇಲೆ ಆರೋಪ ಮಾಡಿದವರ ಮೇಲೆ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *