
ಧಾರವಾಡ: ಸಂಡೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ (ಪಿಐ) ವಿರುದ್ಧ ಹಲ್ಲೆ ಆರೋಪದ ಹಿನ್ನೆಲೆ, ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠವು ಬಳ್ಳಾರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅವರಿಗೆ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಿ, ನ್ಯಾಯಸಮ್ಮತ ಮತ್ತು ಪಾರದರ್ಶಕ ತನಿಖೆ ನಡೆಸುವಂತೆ ಆದೇಶ ನೀಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಅರ್ಜಿದಾರ ಮತ್ತು ಪ್ರತಿವಾದಿಗಳ ವಾದಗಳನ್ನು ಆಲಿಸಿದ ನಂತರ ಈ ನಿರ್ದೇಶನ ಹೊರಡಿಸಿದೆ.
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಕೋಳೂರು ಗ್ರಾಮದ ವಿ. ವಿವೇಕಾನಂದ ಅವರು, ಸಂಡೂರು ಪಿಐ ಮಹೇಶ್ ಗೌಡ ತಮ್ಮ ಮೇಲೆ ಕ್ರೂರ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಆಗಸ್ಟ್ 24, 2025 ರಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಭೇಟಿ ಮಾಡಲು ಸಂಡೂರಿಗೆ ತೆರಳಿದ್ದ ಸಂದರ್ಭದಲ್ಲಿ, ಮಹೇಶ್ ಗೌಡ ಸಚಿವರನ್ನು ಭೇಟಿ ಮಾಡಲು ಅವಕಾಶ ನೀಡದಿರುವುದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಾಗ್ವಾದದ ವೇಳೆ ಪಿಐ ಮಹೇಶ್ ಗೌಡ ಹಲ್ಲೆ ನಡೆಸಿದ್ದಾರೆ ಎಂದು ವಿವೇಕಾನಂದ ದೂರಿದ್ದಾರೆ.
ಘಟನೆ ನಂತರ ವಿವೇಕಾನಂದ ಅವರು ಸಂಡೂರು ಠಾಣೆಯಲ್ಲೇ ಪಿಐ ವಿರುದ್ಧ ದೂರು ನೀಡಿದ್ದರೂ, ಪೊಲೀಸ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಂತರ ಉನ್ನತಾಧಿಕಾರಿಗಳು ಹಾಗೂ ಗೃಹಮಂತ್ರಿಗಳಿಗೂ ಮನವಿ ಮಾಡಿದರೂ ಪ್ರತಿಕ್ರಿಯೆ ದೊರಕದ ಕಾರಣ, ಅಕ್ಟೋಬರ್ನಲ್ಲಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಯಿತು. ತಮ್ಮ ಆರೋಪಕ್ಕೆ ಆಧಾರವಾಗಿ ವೈದ್ಯಕೀಯ ವರದಿ ಮತ್ತು ಛಾಯಾಚಿತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಡಿಜಿಪಿ/ಐಜಿಪಿ ಹಾಗೂ ಬಳ್ಳಾರಿ ಎಸ್ಪಿಗೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದರು.
ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಬಳ್ಳಾರಿ ಎಸ್ಪಿಗೆ ತಕ್ಷಣ ಎಫ್ಐಆರ್ ದಾಖಲಿಸಿ, ನ್ಯಾಯಯುತ ತನಿಖೆ ನಡೆಸಲು ಆದೇಶಿಸಿದೆ.

