
ಚಿಕ್ಕಮಗಳೂರು: ವಾರಾಂತ್ಯದ ರಜೆಯಿಂದ ಮುಳ್ಳಯ್ಯನಗಿರಿ-ದತ್ತಪೀಠದಲ್ಲಿ ಭಾರಿ ಟ್ರಾಫಿಕ್ ಜಾಮ್, ಪ್ರವಾಸಿಗರ ಪರದಾಟ
ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆ ಮತ್ತು ವಾರಾಂತ್ಯದ ಸರಣಿ ರಜೆಗಳ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ-ದತ್ತಪೀಠ ಭಾಗದಲ್ಲಿ ಪ್ರವಾಸಿಗರ ದಂಡೇ ಹರಿದು ಬಂದಿದ್ದು, ಸುಮಾರು 4 ಕಿಲೋಮೀಟರ್ಗಳಷ್ಟು ಉದ್ದದ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನಗಳ ನಿಯಂತ್ರಣ ಕಷ್ಟಸಾಧ್ಯವಾದ ಕಾರಣ ಪೊಲೀಸರು ತಾತ್ಕಾಲಿಕವಾಗಿ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿದ್ದಾರೆ.
ಮುಳ್ಳಯ್ಯನಗಿರಿ ಮತ್ತು ದತ್ತಪೀಠದ ನಡುವಿನ ಕೈಮರ ಚೆಕ್ಪೋಸ್ಟ್ನಿಂದ ಎನ್.ಎಂ.ಡಿ.ಸಿ.ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರವಾಸಿಗರು ಮಳೆ ಮತ್ತು ಮಂಜಿನ ಮಧ್ಯೆ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಪರದಾಡುವಂತಾಯಿತು. ಸಾವಿರಾರು ವಾಹನಗಳು ಏಕಕಾಲಕ್ಕೆ ಬಂದಿದ್ದರಿಂದ ಟ್ರಾಫಿಕ್ ನಿಯಂತ್ರಿಸಲು ಗ್ರಾಮಾಂತರ ಪೊಲೀಸರು ಹರಸಾಹಸ ಪಡಬೇಕಾಯಿತು.
ಮಳೆಗಾಲದ ವಾತಾವರಣ ಮತ್ತು ಟ್ರಾಫಿಕ್ ಜಾಮ್ನಿಂದಾಗಿ ಪ್ರವಾಸಿಗರಿಗೆ ಉಂಟಾದ ತೊಂದರೆಯನ್ನು ಮನಗಂಡ ಪೊಲೀಸರು, ಪರಿಸ್ಥಿತಿ ತಿಳಿಯುವವರೆಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರದಂತೆ ತಾತ್ಕಾಲಿಕ ನಿರ್ಬಂಧ ವಿಧಿಸಿದ್ದಾರೆ.
ಈ ಪ್ರದೇಶದ ರಸ್ತೆಗಳು ಕಿರಿದಾಗಿದ್ದು, ಇಂತಹ ಸನ್ನಿವೇಶಗಳಲ್ಲಿ ವಾಹನಗಳ ಸಂಚಾರವನ್ನು ನಿರ್ವಹಿಸುವುದು ಸವಾಲಾಗಿದೆ. ಪ್ರವಾಸಿಗರು ತಾಳ್ಮೆಯಿಂದ ಸಹಕರಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

