

ಕುಂದಗೋಳದಲ್ಲಿ ಸಂಗೊಳ್ಳಿ ರಾಯಣ್ಣ ಜಯಂತಿ ವಿಜೃಂಭಣೆಯ ಆಚರಣೆ: ತ್ಯಾಗ, ಬಲಿದಾನ ಸ್ಮರಿಸಿದ ಯುವ ಸಮುದಾಯ
ಕುಂದಗೋಳ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜಯಂತಿಯನ್ನು ಪಟ್ಟಣದ ಕಾಳಿದಾಸ ನಗರದಲ್ಲಿರುವ ಯುವ ಮಂಡಳಿ ಮಿತ್ರರು ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು. ಈ ಸಮಯದಲ್ಲಿ ರಾಯಣ್ಣನವರ ಆದರ್ಶ ಮತ್ತು ದೇಶಭಕ್ತಿಯನ್ನು ಸ್ಮರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಷಣ್ಮುಖ ಎಸ್. ಶಿವಳ್ಳಿ ಅವರು ರಾಯಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದರು. ನಂತರ ಅವರು ಡಿಜೆಗೆ ಚಾಲನೆ ನೀಡುವ ಮೂಲಕ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿ. “ಸಂಗೊಳ್ಳಿ ರಾಯಣ್ಣ ಕೇವಲ ಒಬ್ಬ ಯೋಧನಾಗಿರಲಿಲ್ಲ, ಬದಲಿಗೆ ಅವರು ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ ಒಬ್ಬ ಆದರ್ಶ ವ್ಯಕ್ತಿಯಾಗಿದ್ದರು. ಬ್ರಿಟಿಷರ ಆಡಳಿತದ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ, ತನ್ನ ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ಅವರ ತ್ಯಾಗ ಮತ್ತು ಬಲಿದಾನಗಳು ಇಂದಿನ ಯುವ ಜನಾಂಗಕ್ಕೆ ಅತ್ಯಂತ ಪ್ರೇರಣಾದಾಯಕ. ಅವರ ಶೌರ್ಯ ಮತ್ತು ದೇಶಭಕ್ತಿ ಪ್ರತಿಯೊಬ್ಬ ಭಾರತೀಯನಿಗೂ ಮಾದರಿ” ಎಂದು ರಾಯಣ್ಣನವರ ಹೋರಾಟವನ್ನು ಶ್ಲಾಘಿಸಿದರು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಯುವ ಮಂಡಳಿ ಸದಸ್ಯರು, ನಗರದ ಪ್ರಮುಖರು,ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದ ಆರಂಭದಲ್ಲಿಯೇ ರಾಯಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ವೀರ ಸೇನಾನಿ ರಾಯಣ್ಣನವರನ್ನು ಸ್ಮರಿಸಲಾಯಿತು ಮತ್ತು ಅವರ ಆದರ್ಶಗಳನ್ನು ಪಾಲಿಸುವ ಸಂಕಲ್ಪ ಮಾಡಲಾಯಿತು. ಈ ಕಾರ್ಯಕ್ರಮವು ಸ್ಥಳೀಯರಲ್ಲಿ ದೇಶಭಕ್ತಿಯ ಭಾವನೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಯಶಸ್ವಿಯಾಯಿತು.

