
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಈಗಿನ ಕಟ್ಟಡಕ್ಕೆ ಸ್ಥಳವನ್ನು ನೀಡಿ, ಕಟ್ಟಡದ ನಿರ್ಮಾಣದ ಉಸ್ತುವಾರಿಯನ್ನು ವಹಿಸಿಕೊಂಡು, ಪರಿಷತ್ತಿನ ಬೆಳವಣಿಗೆಯಲ್ಲಿ ಸದಾ ಆಸಕ್ತಿ ಹೊಂದಿದವರು ಸರ್ ಮಿರ್ಜಾ ಇಸ್ಮಾಯಿಲ್ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದರು. ಅವರ ಅವಧಿಯಲ್ಲಿ ಕನ್ನಡವು ಆಡಳಿತ ಭಾಷೆಯಾಗಿ ಮನ್ನಣೆ ಪಡೆದಿತ್ತು ಎಂದು ಹೇಳಿದ ಅವರು, ಪರಿಷತ್ತು ಸರ್ ಮಿರ್ಜಾ ಅವರನ್ನು ತನ್ನ ಆಧಾರ ಸ್ತಂಭಗಳಲ್ಲೊಬ್ಬರಾಗಿ ಸದಾ ಸ್ಮರಿಸುತ್ತದೆ ಎಂದರು.
ಅವರು ಶನಿವಾರದಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ ೧೪೨ನೆಯ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮೈಸೂರು ಸಂಸ್ಥಾನದ ಸ್ವರ್ಣಕಾಲ:
ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರ ಜೊತೆಗಾರಿಕೆಯ ಅವಧಿಯನ್ನು “ಮೈಸೂರು ಸಂಸ್ಥಾನದ ಸ್ವರ್ಣಕಾಲ” ಎಂದು ಬಣ್ಣಿಸಲಾಗಿದೆ. ವಿಭಿನ್ನ ಧರ್ಮಗಳ ಹಿನ್ನೆಲೆಯಿಂದ ಬಂದರೂ ಸೋದರರಂತೆ ಒಂದುಗೂಡಿ ಕೆಲಸ ಮಾಡಿದ ಈ ಇಬ್ಬರ ಜೊತೆಗಾರಿಕೆಯನ್ನು ಮೆಚ್ಚಿದ ಮಹಾತ್ಮ ಗಾಂಧೀಜಿಯವರು, “ಇದೋ ಇಲ್ಲಿದೆ ‘ರಾಮರಾಜ್ಯ’” ಎಂದು ಕೈತೋರಿಸಿದ್ದರು ಎಂಬುದನ್ನು ಡಾ. ಮಹೇಶ ಜೋಶಿಯವರು ಸ್ಮರಿಸಿಕೊಂಡರು. ದುಂಡುಮೇಜಿನ ಪರಿಷತ್ತೆಂದು ಕರೆಯಲಾಗುತ್ತಿದ್ದ ಅಂದಿನ ದಿನಗಳ ಸಭೆಯಲ್ಲಿ ಲಾರ್ಡ್ ಸ್ಯಾಂಕಿ ಅವರು ಮೈಸೂರನ್ನು “ವಿಶ್ವದಲ್ಲೇ ಅತ್ಯಂತ ಶ್ರೇಷ್ಟ ಆಡಳಿತಾತ್ಮಕ ನಗರ” ಎಂದು ಬಣ್ಣಿಸಿದ್ದರಿಂದಾಗಿ, ಭಾರತದ ವಿವಿಧ ಸಂಸ್ಥಾನಗಳ ರಾಜಕುವರರಿಗೆ ಮೈಸೂರಿನಲ್ಲಿ ಆಡಳಿತಾತ್ಮಕ ತರಬೇತಿ ವ್ಯವಸ್ಥೆ ಏರ್ಪಾಡು ಮಾಡಲಾಗಿತ್ತು ಎಂದು ಅವರು ಹೇಳಿದರು.
ಕನ್ನಡ ಪ್ರೋತ್ಸಾಹ, ಆಧುನಿಕ ಬೆಂಗಳೂರಿಗೆ ಶ್ರಮ:
ತಮ್ಮ ಹೃದಾಯಾಂತರಾಳದಲ್ಲಿ ಮೈಸೂರು ರಾಜ್ಯದ ಬಗ್ಗೆ ಅಪಾರ ಪ್ರೇಮ ತುಂಬಿಕೊಂಡಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು ರಾಜ್ಯದೆಲ್ಲೆಡೆ ಕನ್ನಡವನ್ನು ಕಡ್ಡಾಯವಾಗಿ ಕಲಿಸುವುದನ್ನು ಪ್ರೋತ್ಸಾಹಿಸಿದರು. ಅವರ ಆಡಳಿತಾವಧಿಯಲ್ಲಿ ಸರ್ವರಿಗೂ ಸಮಾನತೆಯ ನಿಷ್ಪಕ್ಷಪಾತವಾದ ಆಡಳಿತವನ್ನು ರೂಢಿಯಲ್ಲಿರಿಸಿದ್ದರು. ಬೆಂಗಳೂರು ನಗರಕ್ಕೆ ಆಧುನೀಕರಣದ ಸಕಲ ಸೌಭಾಗ್ಯಗಳನ್ನು ಮೂಡಿಸುವುದರಲ್ಲಿ ಸರ್ ಮಿರ್ಜಾ ಅವರ ಶ್ರಮ ಪ್ರಮುಖ ಪಾತ್ರ ನಿರ್ವಹಿಸಿತು.
ಮೈಸೂರು ಸಂಸ್ಥಾನವನ್ನು ಸುಂದರವಾಗಿಸಲು ಅವರು ಕೈಗೊಂಡ ಕಾರ್ಯಗಳಲ್ಲಿ ‘ಕೃಷ್ಣರಾಜ ಸಾಗರದ ಬೃಂದಾವನ’ ಎದ್ದು ಕಾಣುತ್ತದೆ. ಇಲ್ಲಿನ ಉದ್ಯಾನವನ, ವೈವಿಧ್ಯಮಯ ನೀರಿನ ಕಾರಂಜಿಗಳು, ವಿದ್ಯುದ್ಧೀಕರಣದ ಸೊಬಗು ವಿಶ್ವದೆಲ್ಲೆಡೆ ಮೈಸೂರಿನ ಕೀರ್ತಿಯನ್ನು ಬೆಳಗಿಸಲು ಮತ್ತಷ್ಟು ಪ್ರೇರಕವಾಯಿತು ಎಂದು ಡಾ. ಜೋಶಿ ಅವರ ಮಹತ್ವವನ್ನು ವರ್ಣಿಸಿದರು.
ರಾಮನ್ ಇನ್ಸ್ಟಿಟ್ಯೂಟ್‌ಗೆ ಭೂದಾನ:
ಭಾರತೀಯ ವಿಜ್ಞಾನದಲ್ಲಿ ಪ್ರಮುಖ ಹೆಸರಾದ ರಾಮನ್ ಇನ್ಸ್ಟಿಟ್ಯೂಟ್ ನಿರ್ಮಾಣಕ್ಕಾಗಿ ಭಾರತೀಯ ವಿಜ್ಞಾನ ಅಕಾಡಮಿಗೆ ಹನ್ನೆರಡು ಎಕರೆಗಳ ಭೂಮಿಯನ್ನು ಮಹಾರಾಜರಿಂದ ಒದಗುವಂತೆ ಮಾಡಿದ್ದು ಸರ್ ಮಿರ್ಜಾ ಇಸ್ಮಾಯಿಲ್ ಅವರು ಮಾಡಿದ ಮತ್ತೊಂದು ಶ್ರೇಷ್ಠ ಕೆಲಸ ಎಂದರು.
ಬೆಂಗಳೂರು ನಗರದಲ್ಲಿ ಉತ್ಕೃಷ್ಟ ರೀತಿಯ ಉದ್ಯಾನವನಗಳು ಮತ್ತು ಸಸ್ಯರಾಶಿಯನ್ನು ನಿರ್ಮಿಸಲು ವಿಶ್ವದೆಲ್ಲೆಡೆಯಿಂದ ಉತ್ಕೃಷ್ಟ ಚಿಂತಕರನ್ನು ಒಂದುಗೂಡಿಸಿ, ಇಲ್ಲಿನ ಮರಗಳು ವರ್ಷವಿಡೀ ಹಸುರಾಗಿರುವಂತೆಯೂ, ವಿವಿಧ ರೀತಿಯಲ್ಲಿ ಎಲ್ಲ ಕಾಲದಲ್ಲೂ ವರ್ಣಾಲಂಕಾರದ ಪುಷ್ಪಗಳಿಂದ ಕಂಗೊಳಿಸುವಂತೆಯೂ ಕ್ರಮ ಕೈಗೊಂಡರು. ಇದರ ಫಲವಾಗಿ ಬೆಂಗಳೂರು ಮತ್ತು ಮೈಸೂರು ನಗರಗಳಿಗೆ “ಉದ್ಯಾನವನಗಳ ನಗರ” ಎಂದು ಹೆಸರು ಬರುವಂತೆ ಮಾಡಿದರು ಎಂದು ಡಾ. ಜೋಶಿಯವರು ಅವರ ಕೊಡುಗೆಗಳನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ.ಎಂ. ಪಟೇಲ್ ಪಾಂಡು, ಗೌರವ ಕೋಶಾಧ್ಯಕ್ಷರಾದ ಡಿ.ಆರ್. ವಿಜಯ ಕುಮಾರ್ ಮತ್ತು ಮಾಧ್ಯಮ ಸಂಚಾಲಕರಾದ ಎಸ್. ಎಸ್. ಶ್ರೀಧರ ಮೂರ್ತಿ ಸೇರಿದಂತೆ ಪರಿಷತ್ತಿನ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸರ್ ಮಿರ್ಜಾ ಇಸ್ಮಾಯಿಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

