ಭಾವನೆಗಳನ್ನು ದೃಶ್ಯ ರೂಪದಲ್ಲಿ ವ್ಯಕ್ತಪಡಿಸುವ ಪ್ರಬಲ ಮಾಧ್ಯಮ ಚಿತ್ರಕಲೆ: ಕೆ.ವಿ. ಸುಬ್ರಹ್ಮಣ್ಯಂ

Spread the love

ಧಾರವಾಡ: ಭಾವನೆಗಳನ್ನು ದೃಶ್ಯ ರೂಪದಲ್ಲಿ ವ್ಯಕ್ತಪಡಿಸುವ ಪ್ರಬಲ ಮಾಧ್ಯಮವೇ ಚಿತ್ರಕಲೆಯಾಗಿದ್ದು, ಚಿತ್ರಕಲೆಯ ಒಂದೊಂದು ಬಣ್ಣಗಳು ವಿಭಿನ್ನ ಸಂಕೇತಗಳನ್ನು ಸೂಚಿಸುತ್ತವೆ ಎಂದು ದೃಶ್ಯ ಕಲಾ ಇತಿಹಾಸಕಾರ ಕೆ.ವಿ. ಸುಬ್ರಹ್ಮಣ್ಯಂ ಅವರು ಅಭಿಪ್ರಾಯಪಟ್ಟರು. ಅವರು ಶನಿವಾರ (ಅ. 25,) ಕರ್ನಾಟಕ ವಿದ್ಯಾವರ್ಧಕ ಸಂಘದ (ಕ.ವಿ.ವ. ಸಂಘ) ಚಿತ್ರಕಲಾ ಪ್ರದರ್ಶನ ಸಭಾಭವನದಲ್ಲಿ ಕಲಾವಿದ ವಿಶ್ವನಾಥ ಗುಗ್ಗರಿ ಅವರ ಚಿತ್ರಕಲಾ ಪ್ರದರ್ಶನದ ಪ್ರಾತ್ಯಕ್ಷಿಕೆ ಉದ್ಘಾಟಿಸಿ ಮಾತನಾಡುತ್ತಿದ್ದರು.

​ಇಂದಿನ ದಿನಗಳಲ್ಲಿ ನೈಜ ಚಿತ್ರಕಲೆಗೆ ಹೆಚ್ಚಿನ ಬೇಡಿಕೆ ಇದೆ. ಚಿತ್ರಕಲೆಯು ಮನುಷ್ಯನನ್ನು ಸಂಸ್ಕಾರಗೊಳಿಸುವ ಶಕ್ತಿ ಹೊಂದಿದೆ. ಕವಿ ರವೀಂದ್ರನಾಥ ಟಾಗೋರ್ ಅವರು ತಮ್ಮ ಶಾಂತಿನಿಕೇತನದಲ್ಲಿ ಮಕ್ಕಳ ಮನೋವಿಕಾಸಕ್ಕಾಗಿ ಚಿತ್ರಕಲೆ, ಸಂಗೀತದಂತಹ ಚಟುವಟಿಕೆಗಳಿಗೆ ಆದ್ಯತೆ ನೀಡಿದ್ದರು. ದೇಶದ ಹೆಸರಾಂತ ಚಿಂತಕರು ಮತ್ತು ತತ್ವಜ್ಞಾನಿಗಳು ಸಹ ಚಿತ್ರಕಲೆಯಿಂದ ಪ್ರಭಾವಿತರಾಗಿದ್ದರು ಎಂದು ಕೆ.ವಿ. ಸುಬ್ರಹ್ಮಣ್ಯಂ ಹೇಳಿದರು. ಮುಖ್ಯ ಅತಿಥಿ ಡಿ.ಎಂ. ಬಡಿಗೇರ ಮಾತನಾಡಿ, ಚಿತ್ರಕಲಾ ರಸಋಷಿ ಎಂ.ಎ. ಚಟ್ಟಿ ಅವರ ಕಲಾಚಿತ್ರಗಳು ತಮ್ಮ ಮೇಲೆ ಪ್ರಭಾವ ಬೀರಿದ್ದು, ಅವರ ಚಿಕ್ಕ ಚಿಕ್ಕ ಕಲಾಕೃತಿಗಳು ಮನಸ್ಸಿಗೆ ಮುದ ನೀಡುವಂತಿವೆ. ಕಲಾವಿದ ವಿಶ್ವನಾಥ ಗುಗ್ಗರಿ ಅವರು ತಮ್ಮ ಮನೋಜ್ಞ ಚಿತ್ರಗಳ ಮೂಲಕ ಹೊಸ ಲೋಕವನ್ನೇ ಸೃಷ್ಟಿಸಿದಂತಿವೆ ಎಂದು ಬಣ್ಣಿಸಿದರು.

​ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ವಿಶ್ವನಾಥ ಗುಗ್ಗರಿ ಅವರ ಕಲಾಕೃತಿಗಳು ನೋಡುವವರ ಮನಸ್ಸನ್ನು ಅರಳಿಸುವಂತಿವೆ. ಚಿತ್ರಕಲೆ ಲಲಿತ ಕಲೆಗಳಲ್ಲೇ ವಿಶಿಷ್ಟವಾಗಿದ್ದು, ಇದು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಮಕ್ಕಳ ಕನಸುಗಳಿಗೆ ಬಣ್ಣ ತುಂಬುವ ಈ ಕಲೆ ಅದ್ಭುತವಾದದ್ದು ಎಂದು ಹೇಳಿದರು. ಹಿರಿಯ ಕಲಾವಿದ ವಿಶ್ವನಾಥ ಗುಗ್ಗರಿ ಅವರು ಮಾತನಾಡಿ, ಧಾರವಾಡದಂತಹ ಸಾಂಸ್ಕೃತಿಕ ನಗರಿಯಲ್ಲಿ ಕ.ವಿ.ವ. ಸಂಘವು ಚಿತ್ರಕಲಾವಿದರ ಪ್ರದರ್ಶನಕ್ಕಾಗಿ ಸುಸಜ್ಜಿತ ಆರ್ಟ್ ಗ್ಯಾಲರಿಯನ್ನು ಸ್ಥಾಪಿಸಿ ಕಲಾವಿದರಿಗೆ ಅನುಕೂಲ ಮಾಡಿಕೊಟ್ಟಿರುವುದನ್ನು ಶ್ಲಾಘಿಸಿದರು. ಎಫ್.ವಿ. ಚಿಕ್ಕಮಠ ಸ್ವಾಗತಿಸಿ, ಪರಿಚಯಿಸಿದರು. ವೀರಣ್ಣ ಒಡ್ಡೀನ ನಿರೂಪಿಸಿದರು ಮತ್ತು ಶಿವಾನಂದ ಭಾವಿಕಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಂಕರ ಕುಂಬಿ, ಡಾ. ಜಿನದತ್ತ ಹಡಗಲಿ, ಡಾ. ಆನಂದ ಪಾಟೀಲ, ಎಸ್.ಕೆ. ಪತ್ತಾರ, ದ್ವಾರಪಾಲಕ, ಶಿ.ಮ. ರಾಚಯ್ಯನವರ, ಬಿ. ಮಾರುತಿ ಸೇರಿದಂತೆ ಚಿತ್ರಕಲಾ ವಿದ್ಯಾರ್ಥಿಗಳು ಹಾಗೂ ಆಸಕ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *