ನ. 14 ರಂದು 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನೆ: ಮುಖ್ಯಮಂತ್ರಿ ಸಿದ್ಧರಾಮಯ್ಯ

Spread the love

ಬೆಂಗಳೂರು: ಕರ್ನಾಟಕದಲ್ಲಿ ಸಹಕಾರ ಚಳುವಳಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ಅಗತ್ಯವಿದೆ ಎಂದು ಹೇಳಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಜವಾಹರಲಾಲ್ ನೆಹರೂ ಅವರ ಜಯಂತಿಯ ದಿನವಾದ ನವೆಂಬರ್ 14 ರಂದು 72ನೇ ಸಹಕಾರ ಸಪ್ತಾಹವನ್ನು ಉದ್ಘಾಟಿಸಲಾಗುವುದು ಎಂದು ಪ್ರಕಟಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಪ್ತಾಹದ ಪೂರ್ವಭಾವಿ ಸಭೆ ಮತ್ತು ನಂತರದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿಯನ್ನು ನೀಡಿದರು.

ಈ ಬಾರಿ ಅರಮನೆ ಮೈದಾನದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಸಹಕಾರ ಸಪ್ತಾಹ ನಡೆಯಲಿದ್ದು, ನಂತರ ಮಂಗಳೂರು, ರಾಯಚೂರು, ಹಾವೇರಿ, ಹೊಸಪೇಟೆ ಮತ್ತು ಕೊಪ್ಪಳದಲ್ಲಿ ಆಚರಣೆಗಳು ನಡೆಯಲಿವೆ. ಸಮಾರೋಪ ಸಮಾರಂಭವು ನವೆಂಬರ್ 20 ರಂದು ಚಾಮರಾಜನಗರದಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.

ಸಹಕಾರ ರತ್ನ ಪ್ರಶಸ್ತಿ ಮಾನದಂಡಗಳ ಬಗ್ಗೆ ಅಭಿಪ್ರಾಯ:
‘ಕರ್ನಾಟಕ ಸಹಕಾರಿ ರತ್ನ’ ಪ್ರಶಸ್ತಿಯನ್ನು ರಾಜ್ಯೋತ್ಸವ ಪ್ರಶಸ್ತಿ ಮಾದರಿಯಲ್ಲಿ ನೀಡಿದರೆ ಒಳ್ಳೆಯದು ಎಂಬುದು ತಮ್ಮ ಅಭಿಪ್ರಾಯ ಎಂದು ಮುಖ್ಯಮಂತ್ರಿ ಸಭೆಯಲ್ಲಿ ತಿಳಿಸಿದರು. ಮೊದಲೆಲ್ಲಾ ನೂರಾರು ಪ್ರಶಸ್ತಿಗಳನ್ನು ನೀಡಲಾಗುತ್ತಿತ್ತು. ಆದರೆ ಈಗ ಆಚರಣೆಯ ಎಷ್ಟನೇ ವರ್ಷವೋ ಅಷ್ಟೇ ಪ್ರಶಸ್ತಿಗಳನ್ನು ನೀಡುವುದು ಸೂಕ್ತ. ಇಲ್ಲವಾದರೆ, ಜಿಲ್ಲೆಗೆ ಒಂದರಂತೆ ಪ್ರಶಸ್ತಿ ನೀಡಿ, ಬೆಂಗಳೂರಿಗೆ ಅಗತ್ಯವಿದ್ದರೆ ಎರಡರಿಂದ ಐದು ಪ್ರಶಸ್ತಿಗಳನ್ನು ನೀಡಬಹುದು ಎಂದು ಅವರು ಸಲಹೆ ನೀಡಿದರು.

‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭವು ಸಪ್ತಾಹದ ಉದ್ಘಾಟನಾ ದಿನವೇ ನಡೆಯಲಿದ್ದು, ಸಹಕಾರ ಮಹಾಮಂಡಳದ ಅಧ್ಯಕ್ಷರೊಂದಿಗೆ ಚರ್ಚಿಸಿ ಉತ್ತಮ ಸಹಕಾರಿಯನ್ನು ಆಯ್ಕೆ ಮಾಡುವುದಾಗಿ ಮುಖ್ಯಮಂತ್ರಿ ತಿಳಿಸಿದರು. ರಾಜ್ಯದ ಸಹಕಾರಿ ಧುರೀಣರು ತಮಗೆ ಜವಾಬ್ದಾರಿ ಕೊಟ್ಟಿದ್ದು, ತಾವೇ ಪ್ರಶಸ್ತಿಗೆ ಹೆಸರು ಸೂಚಿಸುವಂತೆ ಕೋರಿರುವುದಾಗಿ ಅವರು ಹೇಳಿದರು.

ಸಹಕಾರಿ ಕ್ಷೇತ್ರದ ಸಬಲೀಕರಣಕ್ಕೆ ಬದ್ಧ:
ಸಹಕಾರಿ ಕ್ಷೇತ್ರವನ್ನು ಮೊದಲಿನಿಂದಲೂ ಬೆಂಬಲಿಸಿಕೊಂಡು ಬಂದಿರುವುದಾಗಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು. ಸಹಕಾರಿ ಕ್ಷೇತ್ರದಲ್ಲಿ ಒಕ್ಕೂಟಗಳನ್ನು ಇನ್ನಷ್ಟು ಬಲಗೊಳಿಸಲು ತಮ್ಮ ಸರ್ಕಾರ ಬದ್ಧವಾಗಿದೆ. ಈ ಸಂದರ್ಭದಲ್ಲಿ ಅವರು, ಶಾಸಕರಾಗಿದ್ದಾಗ ಹಾಲು ಉತ್ಪಾದಕರ ಸಂಘಗಳು ರೈತರ ಅಧೀನದಲ್ಲಿಯೇ ನಡೆಯಬೇಕು ಎಂದು ಒತ್ತಾಯಿಸಿದ್ದನ್ನು ಸ್ಮರಿಸಿದರು. “ಹಾಲಿನ ಡೈರಿಗಳನ್ನು ಹಾಲಿನ ಒಕ್ಕೂಟಗಳ ಅಧೀನದಲ್ಲಿ ಮೊದಲ ಬಾರಿಗೆ ತಂದಿದ್ದು ನಾನೇ. ಹೀಗೆ ತರುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೆ” ಎಂದು ಹೇಳಿದರು.

ರಾಜ್ಯದಲ್ಲಿ ಪ್ರತಿದಿನ 1 ಕೋಟಿ ಲೀಟರ್ ಹಾಲು ಉತ್ಪಾದನೆ ಆಗುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಸಹಕಾರ ತತ್ವದಡಿ ಬರುವ ಎಲ್ಲಾ ಸಂಘ-ಸಂಸ್ಥೆಗಳನ್ನು ಸಬಲೀಕರಣಗೊಳಿಸಲಾಗುವುದು ಎಂದರು. ರೈತರ ಸಾಲಮನ್ನಾ ಕುರಿತು ಮಾತನಾಡಿ, ರಾಜ್ಯದ ಬಹುತೇಕ ರೈತರ ಸಾಲಮನ್ನಾ ಮಾಡಲಾಗಿದೆ. ರಾಜ್ಯದ ನೇಕಾರ, ಬಡಗಿ, ಮೀನುಗಾರರ ಸೊಸೈಟಿಗಳಂತಹ ವೃತ್ತಿಮೂಲ ಸಂಘಗಳನ್ನು ಹಂತ ಹಂತವಾಗಿ ಸಬಲಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಸಹಕಾರ ಸಪ್ತಾಹದ ಘೋಷವಾಕ್ಯಗಳನ್ನು ಕೇಂದ್ರದ ಬದಲಿಗೆ ಆಯಾ ರಾಜ್ಯಗಳೇ ಘೋಷಿಸಬೇಕು ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *