ಗೋಮಯ ಕ್ರಾಂತಿ: ದೊಡ್ಡಬಳ್ಳಾಪುರದ ರಾಷ್ಟ್ರೋತ್ಥಾನ ಗೋಶಾಲೆ ಹಣತೆಗಳಿಗೆ ವಿದೇಶಕ್ಕೂ ಬೇಡಿಕೆ!

Spread the love

ವರದಿ: ಪ್ರವೀಣ ಗಿಡಸಕ್ಕನವರ

ದೊಡ್ಡಬಳ್ಳಾಪುರ: ಪ್ಲಾಸ್ಟಿಕ್ ಹಾಗೂ ರಾಸಾಯನಿಕಯುಕ್ತ ಉತ್ಪನ್ನಗಳ ಭರಾಟೆಯ ನಡುವೆ, ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿಸುಬ್ರಹ್ಮಣ್ಯ ಕ್ಷೇತ್ರದ ಬಳಿ ಇರುವ ‘ರಾಷ್ಟ್ರೋತ್ಥಾನ ಗೋಶಾಲೆ’ ಗೋಮಯದ ಮೂಲಕ ಹೊಸ ಕ್ರಾಂತಿಗೆ ನಾಂದಿ ಹಾಡಿದೆ. ಈ ಗೋಶಾಲೆ ತಯಾರಿಸುತ್ತಿರುವ ಪರಿಸರ ಸ್ನೇಹಿ ಗೋಮಯದ ಹಣತೆಗಳು ಈ ದೀಪಾವಳಿಗೆ ದೇಶ ಮಾತ್ರವಲ್ಲದೆ ವಿದೇಶಕ್ಕೂ ರಫ್ತಾಗುತ್ತಿದ್ದು, ಸ್ವಾವಲಂಬನೆಯ ದಾರಿಯನ್ನು ತೋರಿಸುತ್ತಿವೆ.

ದೀಪಾವಳಿ ಹಬ್ಬದ ಅಂಗವಾಗಿ ಇಲ್ಲಿನ ಗೋಮಯದ ಹಣತೆಗಳಿಗೆ ಅಪಾರ ಬೇಡಿಕೆ ಉಂಟಾಗಿದೆ. ಮಾರುಕಟ್ಟೆಯಲ್ಲಿ ಸುಮಾರು ಮೂರು ಕೋಟಿ ಹಣತೆಗಳ ಬೇಡಿಕೆ ಇದ್ದು, ಅದರಲ್ಲಿ ರಾಷ್ಟ್ರೋತ್ಥಾನ ಗೋಶಾಲೆಗೆ ಮಾತ್ರವೇ 50 ಲಕ್ಷ ಹಣತೆಗಳ ಆರ್ಡರ್‌ಗಳು ಬಂದಿವೆ ಎಂದು ಗೋಶಾಲೆಯ ಮುಖ್ಯಸ್ಥ ರಾಮಚಂದ್ರ ತಿಳಿಸಿದ್ದಾರೆ. ಬೆಂಗಳೂರು, ತುಮಕೂರು, ಮೈಸೂರು, ಆಂಧ್ರ, ಕಂಚಿ ಸೇರಿದಂತೆ ಹಲವು ರಾಜ್ಯಗಳಿಗೆ ಹಣತೆಗಳು ರವಾನೆಯಾಗುತ್ತಿದ್ದು, ಅಮೆರಿಕಾ ಹಾಗೂ ಇತರ ವಿದೇಶಗಳಿಗೂ ರಫ್ತಾಗುತ್ತಿರುವುದು ವಿಶೇಷವಾಗಿದೆ.

ಸಂಪೂರ್ಣವಾಗಿ ಗೋ ಆಧಾರಿತವಾಗಿರುವ ಈ ಹಣತೆಗಳನ್ನು ದೇಶಿ ಹಸುಗಳ ಸಗಣಿ (ಗೋಮಯ), ಗೋಮೂತ್ರ ಮತ್ತು ಇತರ ನೈಸರ್ಗಿಕ ಉತ್ಪನ್ನಗಳನ್ನು ಬಳಸಿ ತಯಾರಿಸಲಾಗುತ್ತದೆ. ಹಸುವಿನ ಸಗಣಿ, ಗೋಮೂತ್ರ, ಮಣ್ಣು ಮತ್ತು ನೈಸರ್ಗಿಕ ಅಂಟು ಪದಾರ್ಥಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸಿ ಹಿಟ್ಟಿನ ರೂಪಕ್ಕೆ ತರಲಾಗುತ್ತದೆ. ಬಳಿಕ ಯಂತ್ರಗಳ ಸಹಾಯದಿಂದ ಹಣತೆಗಳ ಆಕಾರದ ಅಚ್ಚುಗಳಲ್ಲಿ ಒತ್ತಿ ತಯಾರಿಸಲಾಗುತ್ತದೆ. ಅಚ್ಚಿನಿಂದ ತೆಗೆದ ಹಣತೆಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಯಾವುದೇ ರಾಸಾಯನಿಕಗಳ ಬಳಕೆಯಿಲ್ಲದೆ ನೈಸರ್ಗಿಕ ವಿಧಾನದಲ್ಲಿ ಗಟ್ಟಿಯಾಗಲು ಬಿಡಲಾಗುತ್ತದೆ.

ಪರಿಸರ ಮತ್ತು ಆರೋಗ್ಯದ ದೃಷ್ಟಿಯಿಂದ ಈ ಹಣತೆಗಳು ಅನೇಕ ಪ್ರಯೋಜನಗಳನ್ನು ನೀಡುತ್ತವೆ. ಇವುಗಳನ್ನು ಬಳಸಿ ನಂತರ ಬಿಸಾಡಿದರೂ ಮಣ್ಣಿನಲ್ಲಿ ಸಂಪೂರ್ಣವಾಗಿ ಕರಗಿ ಗೊಬ್ಬರವಾಗಿ ಪರಿವರ್ತನೆಗೊಳ್ಳುತ್ತವೆ. ರಾಸಾಯನಿಕ ಮುಕ್ತವಾದ ಈ ಹಣತೆಗಳಿಂದ ದೀಪಾವಳಿ ಸುರಕ್ಷಿತವಾಗಿ ಆಚರಿಸಬಹುದು. ಜೊತೆಗೆ ಗೋಮಯ ಮತ್ತು ಗೋಮೂತ್ರದ ಅಂಶಗಳಿಂದ ಉರಿಯುವ ಹೊಗೆಯು ಸೊಳ್ಳೆ ಹಾಗೂ ಇತರ ಕೀಟಗಳನ್ನು ದೂರವಿಡುತ್ತದೆ.

ಈ ವಿನೂತನ ಪ್ರಯೋಗದ ಮೂಲಕ ರಾಷ್ಟ್ರೋತ್ಥಾನ ಗೋಶಾಲೆ, ಸಗಣಿ ಎಂದರೆ ಕೇವಲ ತ್ಯಾಜ್ಯವಲ್ಲ, ಅದು ಸಂಪತ್ತೂ ಆಗಬಹುದು ಎಂಬುದನ್ನು ಸಾಬೀತುಪಡಿಸಿದೆ. ರೈತರು ಹಾಗೂ ಮಹಿಳೆಯರು ಗೋಶಾಲಾ ಮಾದರಿಯಲ್ಲಿ ಗೋಮಯದ ಉತ್ಪನ್ನ ತಯಾರಿಕೆಯಲ್ಲಿ ತೊಡಗಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಈ ಪ್ರಯತ್ನ ಪ್ರೇರಣೆಯಾಗಿದೆ. ಗೋ ಆಧಾರಿತ ಉತ್ಪನ್ನಗಳ ಬಳಕೆಗೆ ಉತ್ತೇಜನ ನೀಡುತ್ತಿರುವ ಈ ಪ್ರಯೋಗ, ದೇಶಿ ಗೋವುಗಳ ಮಹತ್ವವನ್ನು ಮತ್ತೊಮ್ಮೆ ಬೆಳಗಿಸಿದೆ.

Leave a Reply

Your email address will not be published. Required fields are marked *