‘ತಾಲಿಬಾನ್ ಆಡಳಿತ’ ನಡೆಸುವ ಕಾಂಗ್ರೆಸ್‌ಗೆ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ!ಸನಾತನ ಧರ್ಮ ಗುರುಗಳ ಹತ್ತಿಕ್ಕುವಿಕೆ: ‘ವಿನಾಶಕಾಲೇ ವಿಪರೀತ ಬುದ್ಧಿ’ – ಕನ್ನೇರಿ ಶ್ರೀಗಳ ನಿರ್ಬಂಧಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗುಡುಗು

Spread the love

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸಂಘಟನೆಯ ನಿಷೇಧದ ಹೇಳಿಕೆಗಳು, ಪಥಸಂಚಲನಕ್ಕೆ ಅನುಮತಿ ನಿರಾಕರಣೆ ಮತ್ತು ಧರ್ಮಗುರುಗಳ ಚಲನವಲನಕ್ಕೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಕೃಷಿ ಹಾಗೂ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಇಂದು (ಗುರುವಾರ) ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತೀವ್ರ ಆಕ್ರೋಶದ ಗುಡುಗು ಮೊಳಗಿಸಿದರು.

ಶ್ರೀಗಳ ನಿರ್ಬಂಧ; ಹಿಂದೂ ವಿರೋಧಿ ನೀತಿ
ಕನ್ನೇರಿಯ ಪರಮಪೂಜ್ಯ ಶ್ರೀ ಕಾಡಸಿದ್ದೇಶ್ವರ ಶ್ರೀಗಳು ವಿಜಯಪುರ ಜಿಲ್ಲೆಗೆ ಪ್ರವೇಶಿಸದಂತೆ ಮತ್ತು ಬಸವನ ಬಾಗೇವಾಡಿಯಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಕುರಿತು ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

“ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಸನಾತನ ಧರ್ಮದ ಗುರುಗಳು, ಸ್ವಾಮೀಜಿಗಳನ್ನು ಹತ್ತಿಕ್ಕುವ ಕೆಲಸದಲ್ಲಿ ಸದಾ ನಿರತವಾಗಿದೆ. ಇದು ಕಾನೂನುಬಾಹಿರ ಮತ್ತು ಸ್ವಾಮೀಜಿಗಳನ್ನು ಬೆದರಿಸುವ ದುಷ್ಕೃತ್ಯ. ಒಂದೆಡೆ ಮುಸ್ಲಿಂ ಧರ್ಮದ ವಿದೇಶದ ಮೌಲ್ವಿಗಳು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಾನೂನು ಮೀರಿ ಪಾಲ್ಗೊಳ್ಳಲು ಅವಕಾಶವಿದೆ. ಆದರೆ, ನಮ್ಮದೇ ದೇಶದ, ನಮ್ಮದೇ ಧರ್ಮದ ಸ್ವಾಮೀಜಿಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಿಲ್ಲ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದ ‘ತಾಲಿಬಾನ್ ಆಡಳಿತದ’ ಕಾನೂನು! ರಾಜ್ಯ ಸರ್ಕಾರ ತಕ್ಷಣವೇ ಸ್ವಾಮೀಜಿಗಳ ಮೇಲೆ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸಬೇಕು” ಎಂದು ಅವರು ಆಗ್ರಹಿಸಿದರು.

‘ಆರ್‌ಎಸ್‌ಎಸ್‌ ಬ್ಯಾನ್‌ಗೆ ಯತ್ನಿಸಿದವರೇ ನಾಶ’
ಆರ್‌ಎಸ್‌ಎಸ್‌ ಸಂಘಟನೆಯನ್ನು ನಿಷೇಧಿಸುವ ಕುರಿತು ಕಾಂಗ್ರೆಸ್‌ ನಾಯಕರು ನೀಡುತ್ತಿರುವ ಹೇಳಿಕೆಗಳ ಕುರಿತು ಮಾತನಾಡಿದ ಶೋಭಾ ಕರಂದ್ಲಾಜೆ, ಇದು ಕಾಂಗ್ರೆಸ್‌ಗೆ ‘ವಿನಾಶಕಾಲೇ ವಿಪರೀತ ಬುದ್ಧಿ’ ಬಂದಿರುವುದನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.

“ಇತಿಹಾಸವನ್ನು ನೋಡಿ. ಆರ್‌ಎಸ್‌ಎಸ್‌ ಎಂಬ ಈ ಬೃಹತ್ ದೇಶಭಕ್ತ ಸಂಘಟನೆಯನ್ನು ಬ್ಯಾನ್ ಮಾಡಲು ಹೋದವರೆಲ್ಲರೂ ರಾಜಕೀಯವಾಗಿ ಸೋತು ಸುಣ್ಣವಾಗಿದ್ದಾರೆ. ಸ್ವಯಂಸೇವಕರು ಬಿಳಿ ಬಟ್ಟೆಯಲ್ಲಿರುವ ಸನ್ಯಾಸಿಗಳಂತೆ ದೇಶ ಸೇವೆಯಲ್ಲಿ ತೊಡಗಿದ್ದಾರೆ. ಇನ್ನೊಮ್ಮೆ ಹುಟ್ಟಿ ಬಂದರೂ ಆರ್‌ಎಸ್‌ಎಸ್ ಅನ್ನು ನಿಷೇಧಿಸಲು ಕಾಂಗ್ರೆಸ್‌ಗೆ ಸಾಧ್ಯವಿಲ್ಲ. ದ್ವೇಷ ರಾಜಕಾರಣ ಬಿಟ್ಟು ರಚನಾತ್ಮಕವಾಗಿ ಮಾತನಾಡಲು ಕಾಂಗ್ರೆಸ್‌ ನಾಯಕರಿಗೆ ಯೋಗ್ಯತೆ ಇಲ್ಲ,” ಎಂದು ಅವರು ನೇರವಾಗಿ ಸವಾಲು ಹಾಕಿದರು.

ಕೇವಲ ಒಂದು ದಿನದ ಶಾಂತಿಯುತ ಪಥಸಂಚಲನಕ್ಕೆ ಅನುಮತಿ ನೀಡಲು ಸರ್ಕಾರ ಭಯಪಡುವುದು ಅದರ ದುರ್ಬಲ ಆಡಳಿತಕ್ಕೆ ಸಾಕ್ಷಿ ಎಂದರು.

ರಾಜ್ಯದಲ್ಲಿ ಅರಾಜಕತೆ, ಅಭಿವೃದ್ಧಿಗೆ ನಿರ್ಲಕ್ಷ್ಯ
ರಾಜ್ಯದಲ್ಲಿನ ಆಡಳಿತ ವೈಫಲ್ಯದ ಬಗ್ಗೆಯೂ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

“ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿ, ಕಸದ ಸಮಸ್ಯೆ ಬೀದಿಗೆ ಬಂದಿದೆ. ವೇತನ ಸಿಗದೆ ಗ್ರಂಥಪಾಲಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ರಾಜ್ಯದಲ್ಲಿ ಎಂತಹ ಆರ್ಥಿಕ ಬಿಕ್ಕಟ್ಟು ಇದೆ ಎಂಬುದನ್ನು ತೋರಿಸುತ್ತದೆ. ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾದಂತೆ ಭಾಸವಾಗುತ್ತಿದೆ” ಎಂದು ಟೀಕಿಸಿದರು.

ಕೇಂದ್ರದ ಯೋಜನೆಗಳ ಸಮರ್ಪಕ ಜಾರಿಗೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಂತಹ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ರಾಜ್ಯ ಹಿಂದಿದೆ. ಈ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ಕೇವಲ ರಾಜಕೀಯ ಹೇಳಿಕೆಗಳನ್ನು ನೀಡುವುದರಿಂದ ರಾಜ್ಯದ ಜನರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಶೋಭಾ ಕರಂದ್ಲಾಜೆ ನುಡಿದರು.

Leave a Reply

Your email address will not be published. Required fields are marked *