

ಅನ್ನ ವ್ಯರ್ಥ ಮಾಡುವುದು ಪಾಪ: ಅನ್ನಬ್ರಹ್ಮನಿಗೆ ಮಾಡುವ ಅವಮಾನ ಇದು – ಸಿ.ಎಂ. ಸಿದ್ದರಾಮಯ್ಯ
ಬೆಂಗಳೂರು: “ಹಸಿವಿನ ಸಂಕಟ ಮತ್ತು ಅನ್ನದ ಮೌಲ್ಯ ನನಗೆ ಗೊತ್ತಿದೆ. ಹಾಗಾಗಿಯೇ ಹಸಿದವರ ಹೊಟ್ಟೆ ತುಂಬಿಸುವ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿರುವುದು,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದರು. ಅನ್ನ ವ್ಯರ್ಥ ಮಾಡುವುದು ಪಾಪದ ಕೆಲಸ, ಇದು ಅನ್ನಬ್ರಹ್ಮನಿಗೆ ಮಾಡುವ ಅವಮಾನ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ಆಯೋಜಿಸಿದ್ದ “ವಿಶ್ವ ಆಹಾರ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಹಾರ ವ್ಯರ್ಥದ ಗಂಭೀರತೆ
“ಮಹಾತ್ಮ ಗಾಂಧೀಜಿ ಅವರು ಅನ್ನ ವ್ಯರ್ಥ ಮಾಡುವುದು ಪಾಪದ ಕೆಲಸ ಎಂದು ಹೇಳಿದ್ದಾರೆ. ಆದರೆ, ಬೆಂಗಳೂರು ಒಂದರಲ್ಲೇ ಪ್ರತಿ ವರ್ಷ 943 ಟನ್ ಆಹಾರ ವೇಸ್ಟ್ ಆಗುತ್ತಿದೆ. ಅಂದರೆ, ಅಂದಾಜು 360 ಕೋಟಿ ಮೌಲ್ಯದ ಆಹಾರವನ್ನು ನಾವು ವ್ಯರ್ಥ ಮಾಡುತ್ತಿದ್ದೇವೆ ಎಂದು ಜಿ.ಕೆ.ವಿ.ಕೆ. ಅಧ್ಯಯನ ವರದಿ ಹೇಳುತ್ತಿದೆ,” ಎಂದು ಸಿ.ಎಂ. ಆತಂಕ ವ್ಯಕ್ತಪಡಿಸಿದರು. ಗೊತ್ತಿದ್ದೂ ಆಹಾರ ವ್ಯರ್ಥ ಮಾಡುವುದು ಅನ್ನಕ್ಕೆ ತೋರಿಸುವ ಅಹಂಕಾರ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಯ ಬಡವರ ವಿರೋಧಿ ನೀತಿ ಟೀಕೆ
“ಯಾರೂ ಹಸಿವಿನಿಂದ ಮಲಗಬಾರದು ಎನ್ನುವುದು ನಮ್ಮ ಬದ್ಧತೆ. ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿದ್ದು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು. ಆದರೆ, ಆಗ ಬಿಜೆಪಿ ಈ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸಿತ್ತು. ಬಡವರ ವಿರೋಧಿ ನೀತಿಯೇ ಬಿಜೆಪಿಯ ಸಿದ್ಧಾಂತ,” ಎಂದು ಸಿದ್ದರಾಮಯ್ಯ ಟೀಕಿಸಿದರು. ಬಡವರ ಪರ ಕಾರ್ಯಕ್ರಮ ನೀಡಿದ ಕಾಂಗ್ರೆಸ್‌ಗೆ ಮಾತ್ರ ಚಪ್ಪಾಳೆ ತಟ್ಟಬೇಕು, ಅನ್ನದ ಪರವಾಗಿ ಇರುವ ತಮ್ಮ ಬದ್ಧತೆಯನ್ನು ನಾಗರಿಕರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಅನ್ನಭಾಗ್ಯ: ಕಾಳಸಂತೆ ತಡೆಗೆ ‘ಇಂದಿರಾ ಕಿಟ್’
ಅನ್ನಭಾಗ್ಯದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್ಚರಿಸಿದರು. ಕಾಳಸಂತೆ ಮಾರಾಟ ತಡೆಯಲು 10 ಕೆ.ಜಿ. ಅಕ್ಕಿಯ ಬದಲಿಗೆ 5 ಕೆ.ಜಿ. ಅಕ್ಕಿ ನೀಡಿ, ಉಳಿದ 5 ಕೆ.ಜಿ.ಗೆ ಸಮನಾದ ಮೌಲ್ಯದ ತೊಗರಿ ಬೇಳೆ, ಅಡುಗೆ ಎಣ್ಣೆ, ಸಕ್ಕರೆ ಹಾಗೂ ಉಪ್ಪು ಒಳಗೊಂಡಿರುವ ‘ಇಂದಿರಾ ಕಿಟ್’ ವಿತರಿಸಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ಘೋಷಿಸಿದರು.
ನಂತರ ಡಿ ಸಿ ಎಂ ಡಿ ಕೆ ಶಿವಕುಮಾರ ಮಾತನಾಡಿ, ‘ಕರ್ನಾಟಕ ಮಾದರಿ’ ಇಡೀ ದೇಶಕ್ಕೆ ಆದರ್ಶ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, “ಕರ್ನಾಟಕದಲ್ಲಿ ನಮ್ಮ ಸರ್ಕಾರ ಜಾರಿಗೊಳಿಸಿದ ‘ಗ್ಯಾರಂಟಿ’ ಮಾದರಿಯನ್ನು ಇಡೀ ದೇಶ ಪಾಲಿಸುತ್ತಿದೆ,” ಎಂದು ಹೆಮ್ಮೆಯಿಂದ ನುಡಿದರು.
ಅನ್ನಕ್ಕೆ ಗೌರವ ಮತ್ತು ಆಹಾರದ ಹಕ್ಕು
“ಆಹಾರ ತಿನ್ನುವ ಹಕ್ಕು ನಮಗಿದೆ, ಆದರೆ ಅದನ್ನು ಬಿಸಾಡುವ ಹಕ್ಕು ನಮಗಿಲ್ಲ. ಹಸಿದವರಿಗೆ ಮಾತ್ರ ಅನ್ನದ ಬೆಲೆ ಗೊತ್ತು. ಜವಾಹರಲಾಲ್ ನೆಹರು ಅವರ ಕಾಲದಿಂದ ಆರಂಭವಾದ ಆಹಾರ ವಿತರಣೆ ವ್ಯವಸ್ಥೆ, ಇಂದಿರಾ ಗಾಂಧಿಯವರ ಪಡಿತರ ಚೀಟಿ ವ್ಯವಸ್ಥೆ ಮೂಲಕ ಬಡವರಿಗೆ ಶಕ್ತಿ ತುಂಬಿದೆ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಅನ್ನಭಾಗ್ಯ ಕಾರ್ಯಕ್ರಮ’ದ ಮೂಲಕ ಯಾರೂ ಹಸಿವಿನಿಂದ ಇರಬಾರದು ಎಂದು ಬದ್ಧತೆ ತೋರಿಸಿದ್ದಾರೆ,” ಎಂದು ಡಿಕೆಶಿ ಹೇಳಿದರು.
ಬಡವರ ಪರ ಯೋಜನೆಗಳು
ಈ ಹಿಂದೆ ಬಿಜೆಪಿ ಆಡಳಿತದ ಅವಧಿಯಲ್ಲಿ ಜನರ ಆದಾಯ ಪಾತಾಳಕ್ಕೆ ಹೋಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದ್ದಕ್ಕೆ ಪರಿಹಾರ ನೀಡಲು ನಾವು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದೆವು. ಈಗ ಗ್ಯಾರಂಟಿಗಳನ್ನು ಟೀಕಿಸಿದವರೇ ಇತರ ರಾಜ್ಯಗಳಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತಿದ್ದಾರೆ ಎಂದು ಅವರು ಬಿಜೆಪಿಯನ್ನು ಪರೋಕ್ಷವಾಗಿ ಕುಟುಕಿದರು.
ಹಿರಿಯರಿಗೆ ‘ಅನ್ನ ಸುವಿಧಾ’ ವಿಸ್ತರಣೆ
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ, 75 ವರ್ಷ ಮೇಲ್ಪಟ್ಟ ಅಂತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್ ಪಡಿತರದಾರರಿಗಾಗಿ ‘ಅನ್ನ ಸುವಿಧಾ ಯೋಜನೆ’ ವಿಸ್ತರಣೆ ಮಾಡಲಾಗಿದೆ. ಈ ಯೋಜನೆಯಡಿ ಹಿರಿಯ ವಯೋವೃದ್ಧರ ಮನೆ ಬಾಗಿಲಿಗೆ ಪಡಿತರವನ್ನು ತಲುಪಿಸಲಾಗುತ್ತದೆ. ಇದರ ಸದುಪಯೋಗ ಪಡೆಯಲು ನ್ಯಾಯಬೆಲೆ ಅಂಗಡಿಯಲ್ಲಿ ನೋಂದಾಯಿಸುವಂತೆ ಅವರು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಆಹಾರ ಸಚಿವರಾದ ಕೆ.ಹೆಚ್. ಮುನಿಯಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

