ಪಠ್ಯ ಮೀರಿದ ಜ್ಞಾನ ಬೋಧನೆ ಇಂದಿನ ಅಗತ್ಯ: ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ಅಭಿಮತ

Spread the love

ಧಾರವಾಡ: ಶಿಕ್ಷಕರಿಗೆ ಕೇವಲ ಪಠ್ಯ ಪುಸ್ತಕವೇ ಸರ್ವಸ್ವವಾಗಬಾರದು. ಪಠ್ಯಪುಸ್ತಕ ಮೀರಿದ ಜ್ಞಾನವನ್ನು ವಿಷಯ ಬೋಧನೆಯ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸುವುದು ಇಂದಿನ ಶಿಕ್ಷಣದ ಅಗತ್ಯವಾಗಿದೆ ಎಂದು ಖ್ಯಾತ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ಅವರು ಅಭಿಪ್ರಾಯಪಟ್ಟರು.

ಅವರು ಬುಧವಾರದಂದು ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘವು (ಕ.ವಿ.ವ. ಸಂಘ) ನಿಂಗಣ್ಣ ಕುಂಟಿ (ಇಟಗಿ) ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಮತ್ತು ‘ನಿವೃತ್ತರಾಗಿಯೂ ಕ್ರಿಯಾಶೀಲರಾಗಿರುವ ಶಿಕ್ಷಕರಿಗೆ ಸನ್ಮಾನ’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.

ಪ್ರಾಥಮಿಕ ಶಿಕ್ಷಣವೇ ಶಿಕ್ಷಣದ ಬುನಾದಿ. ಈ ಬುನಾದಿ ಗಟ್ಟಿಯಾಗಬೇಕಾದರೆ ವಿದ್ಯಾರ್ಥಿಗಳಲ್ಲಿ ಸಮಾಜದಲ್ಲಿ ಬದುಕುವ ಸಾಮರ್ಥ್ಯ, ಸ್ವಾವಲಂಬನೆ, ಉತ್ಪಾದನಾ ಸಾಮರ್ಥ್ಯ, ಹೊಸ ವಿಚಾರಗಳು ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವುದು ಅತ್ಯಗತ್ಯ ಎಂದು ಹಿರೇಮಠ ಹೇಳಿದರು. ಗಾಂಧೀಜಿಯವರ ಮೂಲ ಶಿಕ್ಷಣ ಮತ್ತು ಡಾ. ಲಕ್ಷ್ಮಣಸ್ವಾಮಿ ಮುದಲಿಯಾರ ಆಯೋಗದ ಶಿಫಾರಸ್ಸುಗಳು ಮಕ್ಕಳ ಪರಿಪೂರ್ಣ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದವುಗಳಾಗಿವೆ. ನಿಂಗಣ್ಣ ಕುಂಟಿ ಅವರು ಓರ್ವ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ತಮ್ಮ ವೃತ್ತಿಜೀವನದಲ್ಲಿ ಇಂತಹ ಎಲ್ಲಾ ಅಂಶಗಳನ್ನು ಅಳವಡಿಸಿಕೊಂಡಿದ್ದರು ಎಂದು ಸ್ಮರಿಸಿದರು.

ಸನ್ಮಾನದ ಹರ್ಷ:
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ (ಇಟಗಿ) ಮಾತನಾಡಿ, ನನ್ನ ಸೇವಾವಧಿಯಲ್ಲಿ ನಾನು ಮಕ್ಕಳ ಸಾಹಿತಿಯಾಗಿ ರೂಪುಗೊಳ್ಳಲು ಡಾ. ದ. ರಾ. ಬೇಂದ್ರೆ ಅವರೇ ಪ್ರೇರಕ ಶಕ್ತಿಯಾಗಿದ್ದರು. ಕ್ರಿಯಾಶೀಲರಾಗಿರುವ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಬೇಕೆಂಬುದು ನನ್ನ ಬಹು ದಿನದ ಆಸೆಯಾಗಿತ್ತು ಎಂದು ಸಂತಸ ವ್ಯಕ್ತಪಡಿಸಿದರು.

ಸನ್ಮಾನಿತರು:
ಈ ಸಂದರ್ಭದಲ್ಲಿ ನಿವೃತ್ತರಾಗಿಯೂ ಕ್ರಿಯಾಶೀಲರಾಗಿರುವ ಶಿಕ್ಷಕರಾದ ಶ್ರೀಮತಿ ಇಂದುಮತಿ ನಾಗಪ್ಪ ಬ್ಯಾಲಹುಣಸಿ, ಮಹಾದೇವ ಉ. ಕರ್ಜಗಿ ಮತ್ತು ರಂಗಪ್ಪ ನೀ. ನಾಯ್ಕರ ಅವರನ್ನು ದತ್ತಿ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಕ.ವಿ.ವ. ಸಂಘದ ಪರವಾಗಿ ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಅವರ ಜನ್ಮದಿನದ ಪ್ರಯುಕ್ತ ಸನ್ಮಾನಿಸಿ ಗೌರವಿಸಲಾಯಿತು. ವಿಶ್ರಾಂತ ಪ್ರಾಧ್ಯಾಪಕ ಬಿ. ಎಸ್. ಶಿರೋಳ ಅವರು ಶಿಕ್ಷಕ ವೃತ್ತಿಯ ಗೌರವ ಕುರಿತು ಮಾತನಾಡಿದರು.

ಕ.ವಿ.ವ. ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜ್ಞಾನ ತಂತ್ರಜ್ಞಾನದ ಪ್ರಭಾವದಿಂದಾಗಿ ಶಿಕ್ಷಕರಿಗೆ ಹಿಂದಿನಂತೆ ಕ್ರಿಯಾಶೀಲತೆ ಮತ್ತು ಲವಲವಿಕೆ ಇಂದು ಇಲ್ಲವಾಗಿದೆ. ಇಂದಿನ ಒತ್ತಡದ ಜೀವನ ಇದಕ್ಕೆ ಮುಖ್ಯ ಕಾರಣವಾಗಿರಬಹುದು. ಆದರೂ, ಇಂದಿನ ಶಿಕ್ಷಕರು ಹೊಸ ಚಿಂತನಶೀಲ ಸಮಾಜವನ್ನು ಸೃಷ್ಟಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.

ಡಾ. ಧನವಂತ ಹಾಜವಗೋಳ ಅವರು ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಡಾ. ಜಿನದತ್ತ ಅ. ಹಡಗಲಿ ವಂದಿಸಿದರು.

ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಶಂಕರ ಹಲಗತ್ತಿ, ಡಾ. ಮಹೇಶ ಹೊರಕೇರಿ, ಡಾ. ನಿಂಗೂ ಸೊಲಗಿ, ಎಂ. ಎಂ. ಚಿಕ್ಕಮಠ, ಡಾ. ಲಿಂಗರಾಜ ಅಂಗಡಿ, ವಿ. ಎನ್. ಕೀರ್ತಿವತಿ, ಪುಷ್ಪಾ ಸಾಂಬ್ರಾಣಿ, ಗೋಣಿಬಸವ ಕುಂಟಿ ಶಂಕರ ಹಲಗತ್ತಿ ಸೇರಿದಂತೆ ಮುಂತಾದ ಗಣ್ಯರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *