
ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಪ್ರಸ್ತಾವ ಕುರಿತು ಆಕ್ಷೇಪ; ಸಿಎಂ ಸಿದ್ದರಾಮಯ್ಯ ಅಸಮಾಧಾನ
ಬೆಂಗಳೂರು:ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವು, ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ವಿಚಾರವಾಗಿ ಕಾಂಗ್ರೆಸ್ ನಾಯಕರ ನಡುವಿನ ಆಂತರಿಕ ಸಂಘರ್ಷದ ವೇದಿಕೆಯಾಗಿ ಮಾರ್ಪಟ್ಟಿತು. ಮಾಜಿ ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಮೀಸಲಾತಿ ಕುರಿತು ನೀಡಿದ ಖಡಕ್ ಹೇಳಿಕೆಗಳು ತೀವ್ರ ಚರ್ಚೆಗೆ ಗ್ರಾಸವಾಯಿತು.
ಉಗ್ರಪ್ಪರಿಂದ ನೇರ ಆಕ್ಷೇಪ: “ನಮ್ಮ ತಟ್ಟೆಗೆ ಕೈ ಹಾಕ್ಬೇಡಿ”
ವೇದಿಕೆಯಲ್ಲಿ ಮಾತನಾಡಿದ ವಿ.ಎಸ್. ಉಗ್ರಪ್ಪ ಅವರು, ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ತಮ್ಮ ನಾಯಕ (ವಾಲ್ಮೀಕಿ) ಸಮುದಾಯದ ಆಕ್ಷೇಪವನ್ನು ನೇರವಾಗಿ ವ್ಯಕ್ತಪಡಿಸಿದರು.
”ನಮಗೆ ಕಷ್ಟಪಟ್ಟು ಎಸ್‌ಟಿ ಸ್ಥಾನಮಾನ ಸಿಕ್ಕಿದೆ. ಈಗಾಗಲೇ ಇರುವ ಮೀಸಲಾತಿಯಲ್ಲಿ ಯಾವುದೇ ಕಾರಣಕ್ಕೂ ಕೈ ಹಾಕಿ ಬೇರೆ ಸಮುದಾಯಕ್ಕೆ ನೀಡುವ ಪ್ರಯತ್ನ ಮಾಡಬೇಡಿ. ಮುಖ್ಯಮಂತ್ರಿಗಳೇ, ನಮ್ಮ ತಟ್ಟೆಗೆ ಕೈ ಹಾಕ್ಬೇಡಿ” ಎಂದು ಉಗ್ರಪ್ಪ ಅವರು ವೇದಿಕೆಯಲ್ಲಿಯೇ ಎಚ್ಚರಿಸಿದ ರೀತಿಯ ಮಾತುಗಳು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಇದರಿಂದಾಗಿ, ನಾಯಕ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಸಿಕ್ಕಿರುವುದರ ಹಿಂದೆ ಉಗ್ರಪ್ಪ ಅವರ ಶ್ರಮವಿದೆ ಎಂದು ಸಿಎಂ ಮೆಚ್ಚುಗೆ ಸೂಚಿಸಿದ ಬೆನ್ನಲ್ಲೇ ಈ ನೇರ ಟಾಕ್ ವಾರ್ ನಡೆದಿದೆ.
ಉಗ್ರಪ್ಪ ಹೇಳಿಕೆಗೆ ಸಿಎಂ ಸಿಡಿಮಿಡಿ
ಉಗ್ರಪ್ಪ ಅವರ ಈ ನೇರ ವಾಗ್ದಾಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆಯಲ್ಲೇ ತೀವ್ರವಾಗಿ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಅವರು ಈ ಹಿಂದೆ ಮೀಸಲಾತಿ ಹೋರಾಟದ ಹಿನ್ನೆಲೆಯಲ್ಲಿ ಇಬ್ಬರು ಎಸ್‌ಟಿ ಸಚಿವರ ರಾಜೀನಾಮೆಯನ್ನು ಪಡೆದಿದ್ದ ಘಟನೆಯನ್ನು ನೆನಪಿಸಿಕೊಂಡು, ಅಗತ್ಯ ಬಿದ್ದರೆ ಮತ್ತೆ ರಾಜೀನಾಮೆ ನೀಡಲು ಸಿದ್ಧವಿರುವುದಾಗಿ ಖಡಕ್ ಆಗಿ ಉತ್ತರ ನೀಡಿದರು.
ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ವಿಚಾರದಲ್ಲಿ ಚಳವಳಿ ಮಾಡಿದ್ದು ತಾನಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ, ಜಾತಿ ಸಮೀಕ್ಷೆ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ)ಯನ್ನು ಬಲವಾಗಿ ಸಮರ್ಥಿಸಿಕೊಂಡರು. ಸಮಾನತೆ ಮತ್ತು ಸಮ ಸಮಾಜ ನಿರ್ಮಾಣಕ್ಕೆ ಜಾತಿ ಸಮೀಕ್ಷೆ ಅಗತ್ಯ ಎಂದು ಪ್ರತಿಪಾದಿಸಿದರು.
ವಾಲ್ಮೀಕಿ ಜಯಂತಿ ಆಚರಣೆಯ ಈ ಸಾರ್ವಜನಿಕ ವೇದಿಕೆಯಲ್ಲಿ ನಡೆದ ಈ ‘ಮೀಸಲಾತಿ ಸಮರ’ವು ಕಾಂಗ್ರೆಸ್ ಪಕ್ಷದೊಳಗಿನ ಪ್ರಾದೇಶಿಕ ಮತ್ತು ಸಮುದಾಯವಾರು ಹಿತಾಸಕ್ತಿಗಳ ನಡುವಿನ ಸೂಕ್ಷ್ಮತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

