ಸುಪ್ರೀಂಕೋರ್ಟ್‌ ಕಲಾಪದಲ್ಲೇ ಸಿಜೆಐ ಕಡೆಗೆ ಚಪ್ಪಲಿ ಎಸೆತ!

Spread the love

ನವದೆಹಲಿ: ದೇಶದ ನ್ಯಾಯಾಂಗ ವ್ಯವಸ್ಥೆಗೆ ಆಘಾತಕಾರಿ ಘಟನೆಯೆಂಬಂತೆ, ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಕಲಾಪ ನಡೆಯುತ್ತಿದ್ದಾಗಲೇ 71 ವರ್ಷದ ವಕೀಲರೊಬ್ಬರು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ. ಆರ್. ಗವಾಯಿ ಅವರ ಮೇಲೆ ಚಪ್ಪಲಿ ಎಸೆದಿದ್ದಾರೆ. ಅದೃಷ್ಟವಶಾತ್ ಅದು ಸಿಜೆಐ ಅವರ ಮೇಲೆ ಬೀಳಲಿಲ್ಲ. ಈ ಕೃತ್ಯದ ಹಿಂದೆ ‘ಸನಾತನ ಧರ್ಮಕ್ಕೆ ಅವಮಾನ’ದ ಕುರಿತ ಹಿಂದಿನ ವಿವಾದ ಕಾರಣವಿರಬಹುದು ಎಂದು ಹೇಳಲಾಗಿದೆ.

ಧೃತಿಗೆಡದೆ ವಿಚಾರಣೆ ಮುಂದುವರಿಸಿದ ಸಿಜೆಐ ಗವಾಯಿ

​ಘಟನೆ ನಡೆದ ತಕ್ಷಣ ನ್ಯಾಯಾಲಯದ ಆವರಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಆದರೆ, ಸಿಜೆಐ ಗವಾಯಿ ಅವರು ಕಿಂಚಿತ್ತೂ ಧೃತಿಗೆಡದೆ, ಅತ್ಯಂತ ಶಾಂತವಾಗಿ ಪರಿಸ್ಥಿತಿ ನಿಭಾಯಿಸಿದರು.

​”ಯಾರೂ ಈ ಘಟನೆಯಿಂದ ವಿಚಲಿತರಾಗಬೇಕಿಲ್ಲ. ಗಮನ ಬೇರೆಡೆ ಹರಿಸಬೇಕಾಗಿಯೂ ಇಲ್ಲ. ವಕೀಲರು ನಿಮ್ಮ ವಾದ ಮುಂದುವರಿಸಿ. ನಾವೇನೂ ವಿಚಲಿತರಾಗಿಲ್ಲ. ಇಂಥದ್ದು ನನ್ನ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ” ಎಂದು ಸಮಾಧಾನದಿಂದ ಹೇಳಿದ ನ್ಯಾಯಮೂರ್ತಿ ಗವಾಯಿ, ಎಂದಿನಂತೆ ವಿಚಾರಣೆ ಮುಂದುವರಿಸಿದ್ದಾರೆ. ಜತೆಗೆ, ಆರೋಪಿ ವಕೀಲರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸಿಬ್ಬಂದಿಗೆ ಸೂಚಿಸಿ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಆಗಿದ್ದೇನು? ಸನಾತನ ಘೋಷಣೆ ಕೂಗಿದ ಆರೋಪಿ

​ಸೋಮವಾರ ಎಂದಿನಂತೆ ಕೋರ್ಟ್ ಕಲಾಪಗಳು ನಡೆಯುತ್ತಿದ್ದವು. ಈ ವೇಳೆ, ದೆಹಲಿ ನಿವಾಸಿ ವಕೀಲ ರಾಕೇಶ್ ಕಿಶೋರ್ ಏಕಾಏಕಿ ಸಿಜೆಐ ಕುಳಿತ ಆಸನದ ಮುಂದೆ ಬಂದಿದ್ದಾರೆ. ತಾವು ಧರಿಸಿದ್ದ ಶೂಗಳನ್ನು ಬಿಚ್ಚಿ ಸಿಜೆಐ ಗವಾಯಿಯವರತ್ತ ಎಸೆದಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ರಾಕೇಶ್ ಕಿಶೋರ್‌ ಅವರನ್ನು ಕೋರ್ಟ್ ಆವರಣದಿಂದ ಹೊರಗೆ ಕರೆದೊಯ್ದಿದ್ದಾರೆ. ಈ ವೇಳೆ, ಆರೋಪಿ “ಸನಾತನದ ಅವಮಾನವನ್ನು ಸಹಿಸುವುದಿಲ್ಲ” ಎಂದು ಘೋಷಣೆ ಕೂಗಿದ್ದಾನೆ ಎಂದು ವರದಿಯಾಗಿದೆ.

ಹಿರಿಯ ನ್ಯಾಯವಾದಿಗಳಿಂದ ಖಂಡನೆ

​ಈ ಕೃತ್ಯವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಅವರು ‘ದುರದೃಷ್ಟಕರ ಮತ್ತು ಖಂಡನೀಯ’ ಎಂದು ಕರೆದಿದ್ದಾರೆ. “ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ ಸುಳ್ಳು ಮಾಹಿತಿಯಿಂದ ಇದೆಲ್ಲ ಆಗಿದೆ. ಕೀಳುಮಟ್ಟದ ಪ್ರಚಾರಕ್ಕಾಗಿ ಇದನ್ನು ಮಾಡಲಾಗಿದೆ. ಆದರೂ, ಇದನ್ನು ಸಿಜೆಐ ಅವರು ಹೃದಯ ವೈಶಾಲ್ಯತೆಯಿಂದಲೇ ಸ್ವೀಕರಿಸಿದ್ದಾರೆ. ಹಾಗಂತ, ಇದನ್ನು ಸಂಸ್ಥೆಯ ದೌರ್ಬಲ್ಯ ಎಂದು ಯಾರೂ ಭಾವಿಸಬಾರದು” ಎಂದಿದ್ದಾರೆ. ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರು, ಈ ದಾಳಿಯು ಇಡೀ ಸರ್ವೋಚ್ಚ ನ್ಯಾಯಾಲಯದ ಮೇಲೆ ನಡೆದ ದಾಳಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿವಾದಕ್ಕೆ ಕಾರಣವಾಗಿದ್ದ ಸಿಜೆಐ ಹೇಳಿಕೆ

​ಈ ಘಟನೆಗೆ ಇತ್ತೀಚೆಗೆ ನಡೆದ ವಿವಾದವೊಂದು ಕಾರಣ ಎಂದು ಹೇಳಲಾಗುತ್ತಿದೆ. ಮಧ್ಯಪ್ರದೇಶದ ಖಜುರಾಹೋ ದೇಗುಲದ ಸಂಕೀರ್ಣದಲ್ಲಿರುವ ಜವಾರಿ ದೇಗುಲದಲ್ಲಿ 7 ಅಡಿ ಎತ್ತರದ ವಿಷ್ಣುವಿನ ವಿಗ್ರಹವನ್ನು ಮರುನಿರ್ಮಿಸುವಂತೆ ನಿರ್ದೇಶನ ಕೋರಿ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಸೆಪ್ಟೆಂಬರ್ 16ರಂದು ಈ ಅರ್ಜಿಯ ವಿಚಾರಣೆ ನಡೆಸಿದ್ದ ಸಿಜೆಐ ಗವಾಯಿ ಅವರ ಪೀಠ, “ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಲ್ಲ, ಪ್ರಚಾರ ಹಿತಾಸಕ್ತಿ ಅರ್ಜಿ” ಎಂದು ಹೇಳಿ ಅರ್ಜಿಯನ್ನು ವಮಿತ್ತು. ಅಲ್ಲದೇ, “ನೀವು ವಿಷ್ಣುವಿನ ಮಹಾನ್ ಭಕ್ತರಾಗಿದ್ದರೆ, ಹೋಗಿ ಅವರಲ್ಲೇ ಏನಾದರೂ ಮಾಡುವಂತೆ ಪ್ರಾರ್ಥಿಸಿ” ಎಂದು ಹೇಳಿದ್ದರು. ಈ ಹೇಳಿಕೆಯು ವಿವಾದಕ್ಕೆ ಕಾರಣವಾಗಿತ್ತು. ಬಳಿಕ, ನನ್ನ ಹೇಳಿಕೆಯನ್ನು ಜಾಲತಾಣಗಳಲ್ಲಿ ತಿರುಚಲಾಗಿದೆ ಎಂದು ಸಿಜೆಐ ಸ್ಪಷ್ಟನೆ ನೀಡಿದ್ದರು.

​ಘಟನೆ ಬೆನ್ನಲ್ಲೇ ಬಾರ್ ಕೌನ್ಸಿಲ್ ಆಫ್ ಇಂಡಿಯಾವು ಆರೋಪಿ ರಾಕೇಶ್ ಕಿಶೋರ್‌ ಅವರನ್ನು ವಕೀಲರ ಸಂಘದ ಸದಸ್ಯತ್ವದಿಂದ ಅಮಾನತು ಮಾಡಿದೆ. ಕಾಂಗ್ರೆಸ್, ಸಿಪಿಎಂ ಸೇರಿ ಹಲವು ವಿಪಕ್ಷಗಳು ಈ ಕೃತ್ಯವನ್ನು ಖಂಡಿಸಿ, ಇದು ಸಮಾಜದಲ್ಲಿ ದ್ವೇಷ ಆಳವಾಗಿ ಬೇರೂರಿದೆ ಎಂಬುದನ್ನು ತೋರುತ್ತದೆ ಎಂದು ಟೀಕಿಸಿವೆ.

Leave a Reply

Your email address will not be published. Required fields are marked *