
ನವಲಗುಂದ: ಪ್ರತಿನಿತ್ಯ ಜನರು ಬಳಸುವ ಕರಕುಶಲ ಸಾಮಗ್ರಿಗಳಿಂದ ಹಿಡಿದು ದೇವಾಲಯದ ವಿಗ್ರಹಗಳು, ಸ್ಮಾರಕಗಳು ಹಾಗೂ ಗೃಹೋಪಯೋಗಿ ವಸ್ತುಗಳವರೆಗೆ—ಎಲ್ಲೆಡೆ ವಿಶ್ವಕರ್ಮರ ಕಲೆಯ ಜೀವಂತ ಅಸ್ತಿತ್ವ ಕಾಣಬಹುದು. ಇದು ವಿಶ್ವಕರ್ಮ ಸಮುದಾಯದ ಶ್ರದ್ಧೆ, ನೈಪುಣ್ಯ ಮತ್ತು ಸಾಂಸ್ಕೃತಿಕ ಬದ್ಧತೆಯ ಸಾಕ್ಷಿಯಾಗಿದೆ ಎಂದು ನವಲಗುಂದ ಶಾಸಕ ಎನ್. ಎಚ್. ಕೋನರೆಡ್ಡಿ ಹೇಳಿದರು.
ಅವರು ಭಾನುವಾರ ಪಟ್ಟಣದ ಶ್ರೀ ನಾಗಲಿಂಗ ಭವನದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. “ವಿಶ್ವಕರ್ಮರು ಭಾರತದ ಕರಕುಶಲ ಪರಂಪರೆಯ ಮೂಲಸ್ತಂಭರಾಗಿದ್ದಾರೆ. ಅವರ ಕಲಾತ್ಮಕತೆ ಕೇವಲ ವಸ್ತು ನಿರ್ಮಾಣವಲ್ಲ—ಅದು ಭಾವನೆ, ಭಕ್ತಿ ಮತ್ತು ವಿಜ್ಞಾನಗಳ ಸಂಗಮವಾಗಿದೆ” ಎಂದು ಕೋನರೆಡ್ಡಿ ಬಣ್ಣಿಸಿದರು.
ಶಿಕ್ಷಣಕ್ಕೆ ಒತ್ತು ನೀಡಿ, ಆಧುನಿಕತೆ ಮೈಗೂಡಿಸಿಕೊಳ್ಳಿ
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, “ಹೊಯ್ಸಳರ ಕಾಲದಲ್ಲಿ ಅಮರ ಶಿಲ್ಪಿ ಜಕಣಾಚಾರಿ ನಿರ್ಮಿಸಿದ ಅದ್ಭುತ ದೇವಾಲಯಗಳು ಇಂದು ಯುನೆಸ್ಕೊ ಪಾರಂಪರಿಕ ತಾಣಗಳಾಗಿ ಗುರುತಿಸಿಕೊಂಡಿವೆ. ಅದೇ ರೀತಿಯಲ್ಲಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಶ್ರೀರಾಮನ ಭವ್ಯ ಮೂರ್ತಿಯ ಶಿಲ್ಪಕೌಶಲ್ಯದಲ್ಲಿಯೂ ವಿಶ್ವಕರ್ಮ ಪರಂಪರೆಯ ಸ್ಫೂರ್ತಿ ಅಡಕವಾಗಿದೆ” ಎಂದರು. “ಆದರೆ, ಯುವಜನರು ಶಿಕ್ಷಣಕ್ಕೆ ಹೆಚ್ಚಿ ಒತ್ತು ನೀಡಬೇಕು, ನಿಮ್ಮ ವೃತ್ತಿಯಲ್ಲಿ ಆಧುನಿಕತೆಯನ್ನು ಮೈಗೂಡಿಸಿಕೊಂಡು ಆರ್ಥಿಕವಾಗಿ ಸಬಲರಾಗಿರಿ” ಎಂದು ಸಲಹೆ ನೀಡಿದರು.
ಶ್ರೀ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರಾದ ಈಶ್ವರ ಆಚಾರ್ ಹೊಸಕೋಟಿ ಮಾತನಾಡಿ, ದೇಶದ ಬೆನ್ನಲಬು ರೈತ ಹಾಗೂ ಕಾರ್ಮಿಕರಾದರೆ, ಅವರಿಗೆ ಬೆನ್ನಲಬು ವಿಶ್ವಕರ್ಮರು. “ನೀವು ಯಾವ ಪಕ್ಷದಲ್ಲಿದ್ದೀರಿ, ಅಲ್ಲೇ ನಿಷ್ಠೆಯಿಂದ ರಾಜಕೀಯ ಸ್ಥಾನಮಾನಗಳನ್ನು ಪಡೆದು ಮುಖ್ಯವಾಹಿನಿಯ ಕಡೆಗೆ ಗಮನ ನೀಡಿ. ಕಾರ್ಮಿಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ” ಎಂದು ಸಮುದಾಯಕ್ಕೆ ಕರೆ ನೀಡಿದರು.
ಸನ್ಮಾನ ಹಾಗೂ ಮೆರವಣಿಗೆ
ನಾಗಲಿಂಗ ಸ್ವಾಮಿ ಮಠದ ವೀರೇಂದ್ರ ಮಹಾಸ್ವಾಮೀಜಿಗಳು ಹಾಗೂ ಚಿಕ್ಕುಂಬಿ ನಾಗಲಿಂಗ ಸ್ವಾಮಿ ಮಠದ ಅಭಿನವ ನಾಗಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಗಂಗಪ್ಪ ಕಮ್ಮಾರ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಶಿರಸಂಗಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಪ್ರೊ. ಪಿ. ಬಿ. ಬಡಿಗೇರ, ಸಾಹಿತಿ ಭಾರತಿ ಬಡಿಗೇರ, ನವಲಗುಂದ ವಿಶ್ವಕರ್ಮ ಸಮಾಜದ ಅಧ್ಯಕ್ಷ ನಿಂಗಪ್ಪ ಬಡಿಗೇರ, ಶಿವಪ್ಪ ಪತ್ತಾರ, ಶಾಂತವ್ವ ಹವಳಕೋಡ ಮತ್ತು ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಬಿ. ಎಸ್. ಮಾಯಾಚಾರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಈ ವೇಳೆ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಹಾಗೂ ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು. ಬೆಳಗ್ಗೆ ಶೆಟ್ಟರ ಕೇರಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು.
ಸಮಾಜದ ಮುಖಂಡರಾದ ಆನಂದ ಹವಳಕೋಡ, ಪ್ರಕಾಶ ಬಡಿಗೇರ, ಮೌನೇಶ ವಿಶ್ವಜ್ಞ, ಮಾನಪ್ಪ ಮನವಚಾರ್ಯ, ಅಂದಾನಪ್ಪ ಪತ್ತಾರ, ಪ್ರದೀಪ ಬಡಿಗೇರ, ಕಾಳಪ್ಪ ಬಡಿಗೇರ, ದೇವೆಂದ್ರಪ್ಪ ಬಡಿಗೇರ, ಗುಂಡಣ್ಣ ಖನ್ನೂರ, ನರಸಪ್ಪ ಬಡಿಗೇರ, ಕಾರ್ತಿಕ ಬಡಿಗೇರ ಸೇರಿದಂತೆ ಹಲವು ಹಿರಿಯರು ಭಾಗವಹಿಸಿದ್ದರು. ರವಿ ವಿಶ್ವಜ್ಞ ಸ್ವಾಗತಿಸಿದರು. ಎಲ್. ಎಚ್. ಕಮ್ಮಾರ ನಿರೂಪಿಸಿದರು. ರೂಪಾ ಪತ್ತಾರ ವಂದಿಸಿದರು.

