
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು, ನಾಡಿನ ಶ್ರೇಷ್ಠ ಕೃಷಿ ವಿಜ್ಞಾನಿ ಪ್ರೊ. ಶಿವರಾಜ ಅಮೃತಪ್ಪ ಹೊಸಮನಿ (ಪ್ರೊ. ಎಸ್.ಎ. ಹೊಸಮನಿ) ಅವರ ದತ್ತಿಯ ಅಂಗವಾಗಿ ಇದೇ ಅಕ್ಟೋಬರ್ ೮, ೨೦೨೫ ರಂದು ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿದೆ. ಸಂಘದ ಶ್ರೀ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ಸಂಜೆ ೬ ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ.
‘ಕೃಷಿಯಲ್ಲಿ ಸಾಂಪ್ರದಾಯಿಕ ತಳಿಗಳು : ಇಂದಿನ ಆದ್ಯತೆ’ ಎಂಬ ಮಹತ್ವದ ವಿಷಯದ ಕುರಿತು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಬಿ. ಡಿ. ಬಿರಾದಾರ ಅವರು ಅತಿಥಿ ಉಪನ್ಯಾಸಕರಾಗಿ ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಅವರು ವಹಿಸಲಿದ್ದಾರೆ. ಸಾಹಿತಿಗಳು, ಕಲಾವಿದರು, ಚಿಂತಕರು, ವಿದ್ಯಾರ್ಥಿಗಳು, ಸಂಘದ ಆಜೀವ ಸದಸ್ಯರು ಹಾಗೂ ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಪ್ರೊ. ಎಸ್.ಎ. ಹೊಸಮನಿ: ಹಿನ್ನೋಟ
ಪ್ರೊ. ಶಿವರಾಜ ಅಮೃತಪ್ಪ ಹೊಸಮನಿ ಅವರು ಹಲವಾರು ಸುಧಾರಿತ ಕೃಷಿ ಉಪಕರಣಗಳನ್ನು ಆವಿಷ್ಕರಿಸಿದ ಶ್ರೇಷ್ಠ ಕೃಷಿ ವಿಜ್ಞಾನಿ. ನವಲಗುಂದ ತಾಲೂಕಿನ ಇಬ್ರಾಹಿಂಪುರದ ಕೃಷಿ ಕುಟುಂಬದಲ್ಲಿ ಜನಿಸಿದ ಇವರು, ಧಾರವಾಡ ಕೃಷಿ ವಿ.ವಿ.ಯಿಂದ ಬಿ.ಎಸ್ಸಿ. (ಕೃಷಿ) ಪದವಿ, ಅಮೆರಿಕಾದ ಪೆನಸ್ಕಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು.
ಧಾರವಾಡ ಕೃಷಿ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಅಪಾರ ಶಿಷ್ಯ ಬಳಗವನ್ನು ಗಳಿಸಿದ್ದರು. ಬಳ್ಳಾರಿ ಜಿಲ್ಲೆಯ ಕೃಷಿ ಸಂಶೋಧನಾ ಕೇಂದ್ರದ ಫಾರ್ಮ ಸುಪರಿಂಟೆಂಡೆಂಟ್ ಆಗಿ ಅದರ ಆದಾಯವನ್ನು ಹೆಚ್ಚಿಸಿದ ಖ್ಯಾತಿ ಇವರದ್ದು. ಅಷ್ಟೇ ಅಲ್ಲದೆ, ಧಾರವಾಡ ಕೃಷಿ ವಿವಿಯ ಪ್ರಥಮ ಆಡಳಿತಾಧಿಕಾರಿಯಾಗಿ ವಿಶ್ವವಿದ್ಯಾಲಯಕ್ಕೆ ಭದ್ರ ಬುನಾದಿ ಹಾಕಿದ ಕೀರ್ತಿಯೂ ಇವರಿಗಿದೆ.
ಪ್ರೊ. ಹೊಸಮನಿಯವರು ೧೯೭೨ರಲ್ಲಿ ಕೆನಡಾ ದೇಶದಲ್ಲಿ ಆರು ತಿಂಗಳ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದ್ದರು. ಇವರ ಈ ವ್ಯಾಸಂಗದ ಫಲವಾಗಿ, ಬಿಜಾಪುರದ ಒಣ ಬೇಸಾಯ ಸಂಶೋಧನಾ ಕೇಂದ್ರದಲ್ಲಿ ಬೇಸಾಯ ಶಾಸ್ತ್ರಜ್ಞರಾಗಿ ಸಲ್ಲಿಸಿದ ಸೇವೆಯಿಂದಾಗಿ ಬಿಜಾಪುರ ಜಿಲ್ಲೆಯ ರೈತರಿಗೆ ಲಾಭದಾಯಕ ಒಣ ಬೇಸಾಯದಲ್ಲಿ ತೊಡಗಲು ಸಾಧ್ಯವಾಯಿತು ಎಂಬುದು ಹೆಮ್ಮೆಯ ಸಂಗತಿ. ಬೆಂಗಳೂರು ಕೃಷಿ ವಿ.ವಿ.ಯ ಜೋಳದ ಬೆಳೆಯ ಬೇಸಾಯ ಶಾಸ್ತ್ರಜ್ಞರಾಗಿ ಇವರು ನೀಡಿದ ಕೊಡುಗೆ ಇಂದಿಗೂ ಸ್ಮರಣೀಯವಾಗಿದೆ.
ದತ್ತಿ ಸ್ಥಾಪನೆ: ರೈತಪರ ಕಾಳಜಿ
ನಿವೃತ್ತಿಯ ನಂತರವೂ ತಮ್ಮ ಸ್ವಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ಹುರುಪಿನಿಂದ ತೊಡಗಿಕೊಂಡು, ಸುತ್ತಮುತ್ತಲಿನ ರೈತರಿಗೆ ಕಡಿಮೆ ಖರ್ಚಿನಲ್ಲಿ ಲಾಭದಾಯಕ ಒಕ್ಕಲುತನ ಹೇಗೆ ಮಾಡಬಹುದೆಂದು ನಿರಂತರ ತರಬೇತಿ ನೀಡುತ್ತಿದ್ದರು. ಇವರು ೧೯೯೮, ಅಕ್ಟೋಬರ್ ೮ ರಂದು ನಿಧನರಾದರು.
ತಂದೆಯವರಂತೆ ರೈತ ಪರ ಕಾಳಜಿ ಹೊಂದಿರುವ ಇವರ ಸುಪುತ್ರ, ರೈತ ಹೋರಾಟಗಾರ ಈಶ್ವರಚಂದ್ರ ಹೊಸಮನಿ ಅವರು, ತಮ್ಮ ತಂದೆಯ ಸ್ಮರಣೆಯಲ್ಲಿ ೨೦೧೫ರಲ್ಲಿ ದತ್ತಿಯನ್ನು ಸ್ಥಾಪಿಸಿದ್ದಾರೆ. ಪ್ರತಿ ವರ್ಷ ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮ, ಉಪನ್ಯಾಸ ನಡೆಸಲು ಸಂಘಕ್ಕೆ ಇದರಿಂದ ಅನುಕೂಲವಾಗಿದೆ

