

ನವಲಗುಂದ: ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಣ್ಣಿಹಳ್ಳ, ತುಪ್ಪರಿಹಳ್ಳ, ಮತ್ತು ಗದ್ಯಾಳ ಹಳ್ಳಗಳು ತುಂಬಿ ಉಕ್ಕಿ ಹರಿಯುತ್ತಿವೆ. ಈ ಜಲಪ್ರಳಯದ ಪರಿಣಾಮವಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಶುಕ್ರವಾರ ಬೆಳಿಗ್ಗೆ ತಾಲ್ಲೂಕಿನ ಕೆಲ ಹಳ್ಳಿಗಳ ಸಂಪರ್ಕ ಕಡಿತಗೊಂಡಿತ್ತು ಎಂದು ವರದಿಯಾಗಿದೆ. ಸತತ ಮಳೆಯಿಂದಾಗಿ ಹಳ್ಳಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದು ರೈತರಲ್ಲಿ ಮತ್ತು ಸಾರ್ವಜನಿಕರಲ್ಲಿ ಆತಂಕವನ್ನು ಹೆಚ್ಚಿಸಿದೆ.
ರೈತರಿಗೆ ತಹಶೀಲ್ದಾರರಿಂದ ಎಚ್ಚರಿಕೆ
ತುಂಬಿ ಹರಿಯುತ್ತಿರುವ ಹಳ್ಳಗಳ ಹಿನ್ನೆಲೆಯಲ್ಲಿ, ನವಲಗುಂದ ತಹಶೀಲ್ದಾರ ಸುಧೀರ ಸಾಹುಕಾರ ಅವರು ಸಾರ್ವಜನಿಕರಿಗೆ ಮತ್ತು ರೈತರಿಗೆ ವಿಶೇಷ ಮುನ್ನೆಚ್ಚರಿಕೆ ನೀಡಿದ್ದಾರೆ. ರೈತರು ತಮ್ಮ ದನಕರುಗಳೊಂದಿಗೆ ಯಾವುದೇ ಕಾರಣಕ್ಕೂ ತುಂಬಿ ಹರಿಯುತ್ತಿರುವ ಹಳ್ಳಗಳನ್ನು ದಾಟುವ ಪ್ರಯತ್ನಕ್ಕೆ ಮುಂದಾಗಬಾರದು. ಅಪಾಯಕಾರಿ ಪ್ರದೇಶಗಳಿಗೆ ಅನಗತ್ಯವಾಗಿ ತೆರಳದೆ, ತಮ್ಮ ಸುರಕ್ಷತೆಗಾಗಿ ಎಲ್ಲರೂ ಎಚ್ಚರಿಕೆಯಿಂದ ಇರುವಂತೆ ಅವರು ಮನವಿ ಮಾಡಿದ್ದಾರೆ.
ವಿಜಯದಶಮಿಯೊಳಗೆ ಪರಿಹಾರ ವಿತರಿಸಲು ಗಡುವು
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗಳು ಸಂಪೂರ್ಣ ನಾಶವಾಗಿರುವ ಜೊತೆಗೆ, ಕ್ಷೇತ್ರದ ಬಹುತೇಕ ಮನೆಗಳು ಸಹ ಮಳೆಯಿಂದ ಹಾನಿಗೊಳಗಾಗಿವೆ. ಈ ಹಿನ್ನೆಲೆಯಲ್ಲಿ, ಬಿಜೆಪಿ ನವಲಗುಂದ ತಾಲ್ಲೂಕು ಮಂಡಲ ಅಧ್ಯಕ್ಷ ಗಂಗಪ್ಪ ಬ. ಮನಮಿ ಅವರು ಸರ್ಕಾರಕ್ಕೆ ತಕ್ಷಣ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿರುವ ಅವರು, ಬೆಳೆ ನಷ್ಟದ ಕುರಿತು ಅಧ್ಯಯನ ಮತ್ತು ಪರಿಶೀಲನೆಗೆ ಸಮಯ ವ್ಯರ್ಥ ಮಾಡದೆ, ಸರ್ಕಾರವು ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮನೆ ಹಾನಿ ಮತ್ತು ಬೆಳೆ ನಷ್ಟಕ್ಕೆ ದಸರಾ ಹಬ್ಬದ (ವಿಜಯದಶಮಿ) ಒಳಗಾಗಿ ಪರಿಹಾರ ಹಣ ರೈತರ ಕೈ ಸೇರುವಂತಾಗಬೇಕು. ಒಂದು ವೇಳೆ ಈ ಗಡುವಿನೊಳಗೆ ಸರ್ಕಾರ ಪರಿಹಾರ ವಿತರಿಸಲು ವಿಫಲವಾದಲ್ಲಿ, ಉಗ್ರ ಹೋರಾಟದ ಮೂಲಕ ನ್ಯಾಯ ಪಡೆಯಲಾಗುವುದು ಎಂದು ಗಂಗಪ್ಪ ಮನಮಿ ಅವರು ಎಚ್ಚರಿಕೆ ನೀಡಿದ್ದಾರೆ.

