ಬೆಂಗಳೂರು ನಗರ ಪ್ರದಕ್ಷಿಣೆ: ರಸ್ತೆಗುಂಡಿ, ತ್ಯಾಜ್ಯ ನಿರ್ವಹಣೆ ವೈಫಲ್ಯಕ್ಕೆ ಸಿಎಂ ಸಿದ್ದರಾಮಯ್ಯ ಗರಂ: ರಸ್ತೆ ದುರಸ್ತಿಗೆ ಒಂದು ತಿಂಗಳ ಗಡುವು; ಲೋಪಕ್ಕೆ ಇಬ್ಬರು ಮುಖ್ಯ ಎಂಜಿನಿಯರ್‌ಗಳಿಗೆ ನೋಟಿಸ್

Spread the love

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು (ಶನಿವಾರ) ರಾಜಧಾನಿ ಬೆಂಗಳೂರಿನಲ್ಲಿ ನಗರ ಪ್ರದಕ್ಷಿಣೆ ನಡೆಸಿ ರಸ್ತೆಗಳು ಮತ್ತು ಅಭಿವೃದ್ಧಿ ಕಾಮಗಾರಿಗಳ ಸ್ಥಿತಿಗತಿಯನ್ನು ಖುದ್ದು ಪರಿಶೀಲಿಸಿದರು. ಈ ವೇಳೆ ರಸ್ತೆಗಳಲ್ಲಿನ ಗುಂಡಿಗಳು, ಕಟ್ಟಡ ತ್ಯಾಜ್ಯವನ್ನು ಬೇಕಾಬಿಟ್ಟಿ ಸುರಿದಿರುವುದು, ಮಳೆ ನೀರು ಸಂಗ್ರಹ ಮತ್ತು ಕಳಪೆ ನಿರ್ವಹಣಾ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಅಧಿಕಾರಿಗಳ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಲೋಪ ಸರಿಪಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಲ್ಲದೆ, ನಗರದ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿ, ರಸ್ತೆಗಳನ್ನು ಸಂಚಾರ ಯೋಗ್ಯವಾಗಿಸಲು ಒಂದು ತಿಂಗಳ ಗಡುವು ವಿಧಿಸಿದರು.

ಬಹು ಸ್ಥಳಗಳಲ್ಲಿ ತ್ಯಾಜ್ಯ ವಿಲೇವಾರಿ ವೈಫಲ್ಯ: ಎಂಜಿನಿಯರ್‌ಗಳಿಗೆ ನೋಟಿಸ್
ಪ್ರದಕ್ಷಿಣೆಯ ವೇಳೆ ಹಲವೆಡೆ ತ್ಯಾಜ್ಯ ವಿಲೇವಾರಿ ನಿರ್ವಹಣೆ ಸರಿಯಿಲ್ಲದಿರುವುದು ಸಿಎಂ ಗಮನಕ್ಕೆ ಬಂದಿತು. ರಿಂಗ್ ರಸ್ತೆ ಮತ್ತು ಮಹದೇವಪುರದ ಪಣತ್ತೂರು ಟಿ.ಕ್ರಾಸ್ ರಸ್ತೆಯಲ್ಲಿ ಕಟ್ಟಡ ತ್ಯಾಜ್ಯ ರಾಶಿ ಹಾಕಿದ್ದನ್ನು ಕಂಡು ಸಿಎಂ ಗರಂ ಆದರು. ತ್ಯಾಜ್ಯ ಸುರಿದವರ ವಾಹನಗಳನ್ನು ಸೀಜ್ ಮಾಡಿ ಕೇಸು ದಾಖಲಿಸುವಂತೆ ಆದೇಶ ನೀಡಿದರು. ಅಲ್ಲದೆ, ಪಣತ್ತೂರು ರಸ್ತೆಯಲ್ಲಿ ಕಸ ಸುರಿಯುವುದಕ್ಕೆ ಕಡಿವಾಣ ಹಾಕಲು ಸಿಸಿ ಟಿವಿ ಅಳವಡಿಸಿ, ಬಿಬಿಎಂಪಿ ಮಾರ್ಷಲ್‌ಗಳನ್ನು ನಿಯೋಜಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರಿಗೆ ಸೂಚಿಸಿದರು. ವಾರ್ಡ್ ನಂ. 23ರ ನಾಗವಾರದ ಘನ ತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಭೇಟಿ ನೀಡಿದಾಗ, ಹೊರಭಾಗದಲ್ಲಿ ರಾಶಿ ಕಸ ಬಿದ್ದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಬಿ ಸ್ಮೈಲ್ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದರು. ರಸ್ತೆಯಲ್ಲಿ ಜೆಲ್ಲಿ ಕಲ್ಲುಗಳು ಬಿದ್ದಿರುವುದಕ್ಕೆ ಕಾರಣರಾದ ಮತ್ತೊಬ್ಬ ಮುಖ್ಯ ಎಂಜಿನಿಯರ್ ರಾಘವೇಂದ್ರ ಪ್ರಸಾದ್ ಅವರಿಗೂ ನೋಟಿಸ್ ನೀಡಲು ಸೂಚಿಸಿದರು.

ರಸ್ತೆ ದುರಸ್ತಿ ಮತ್ತು ನಿರ್ವಹಣೆಯಲ್ಲಿ ನಿರ್ಲಕ್ಷ್ಯ:
ಬಳ್ಳಾರಿ ರಸ್ತೆಯ ವಿಂಡ್ಸರ್ ಮ್ಯಾನರ್ ಸಮೀಪ ರಸ್ತೆಯ ಮೇಲೆ ಮಳೆ ನೀರು ಸಂಗ್ರಹವಾಗುತ್ತಿದ್ದ ಸ್ಥಳವನ್ನು ಪರಿಶೀಲಿಸಿದ ಸಿಎಂ, ನೀರು ಸರಾಗವಾಗಿ ಹರಿಯಲು ಸೂಕ್ತ ಒಳಚರಂಡಿ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹೆಬ್ಬಾಳ ಸಮೀಪ ಮೆಟ್ರೋ ಕಾಮಗಾರಿಯ ಸ್ಥಳದಲ್ಲಿ ಬಿಎಂಆರ್‌ಸಿಎಲ್‌ನವರು ಸರ್ವೀಸ್ ರಸ್ತೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿರುವುದು, ಚರಂಡಿ ವ್ಯವಸ್ಥೆಯನ್ನು ಮುಚ್ಚಿರುವುದು ಮತ್ತು ವೈಟ್ ಟಾಪಿಂಗ್ ರಸ್ತೆ ಹಾಳು ಮಾಡಿರುವುದನ್ನು ಗಮನಿಸಿ, ತಕ್ಷಣವೇ ಸರ್ವೀಸ್ ರಸ್ತೆ ಮತ್ತು ಚರಂಡಿ ದುರಸ್ತಿ ಮಾಡುವಂತೆ ಆದೇಶ ನೀಡಿದರು. ಹೆಣ್ಣೂರಿನ ಬಾಗಲೂರು ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿಯನ್ನು ಪರಿಶೀಲಿಸಿದ ಮುಖ್ಯಮಂತ್ರಿಗಳು, ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಕಾಮಗಾರಿಯ ನಂತರ 2-3 ವರ್ಷಗಳ ನಿರ್ವಹಣೆಯ ಜವಾಬ್ದಾರಿ ಗುತ್ತಿಗೆದಾರರಿಗೇ ಇರುತ್ತದೆ. ರಸ್ತೆಯ ಸಮರ್ಪಕ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ವೈಟ್ ಟಾಪಿಂಗ್ ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಎಂಜಿನಿಯರ್‌ಗಳ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಿದರು.

ರಸ್ತೆ ಗುಂಡಿ ಮುಚ್ಚಲು 30 ದಿನಗಳ ಗಡುವು:
ನಗರ ಪ್ರದಕ್ಷಿಣೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಳೆಗಾಲದಲ್ಲಿ ಹೆಚ್ಚಾಗಿರುವ ರಸ್ತೆ ಗುಂಡಿಗಳನ್ನು ದುರಸ್ತಿಗೊಳಿಸಿ ಸಂಚಾರ ಯೋಗ್ಯವಾಗಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. “ಗುಂಡಿಗಳನ್ನು ಮುಚ್ಚುವ ಕಾರ್ಯವು ಗುಣಮಟ್ಟದಿಂದ ಕೂಡಿರಬೇಕು. ಕೇವಲ ಜಲ್ಲಿ ಹಾಕಿ ಟಾರ್ ಹಾಕದೇ ಹಾಗೇ ಬಿಟ್ಟಿದ್ದ ಕಾರಣ, ಸಂಬಂಧಪಟ್ಟ ಕಾರ್ಯನಿರ್ವಾಹಕ ಇಂಜಿನಿಯರನ್ನು ಅಮಾನತ್ತುಗೊಳಿಸಲಾಗಿದೆ” ಎಂದು ಸಿಎಂ ತಿಳಿಸಿದರು. ರಸ್ತೆಗಳಲ್ಲಿ ಯಾವುದೇ ಗುಂಡಿಗಳಿಲ್ಲದಂತೆ ಮುಚ್ಚಬೇಕು, ಲೋಪವಾದರೆ ಸಂಬಂಧಪಟ್ಟ ಆಯುಕ್ತರು ಮತ್ತು ಇಂಜಿನಿಯರ್‌ಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

“ರಸ್ತೆ ಗುಂಡಿಗಳ ಸಮಸ್ಯೆ ಇರುವುದು ನಿಜ. ಆದರೆ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ದುರಸ್ತಿ ಕಾರ್ಯ ನಡೆದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ” ಎಂದು ವಿಪಕ್ಷದತ್ತ ಪರೋಕ್ಷ ಟೀಕೆ ಮಾಡಿದ ಅವರು, ಮಳೆಗಾಲ ಮುಗಿಯುವುದರೊಳಗೆ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ರಸ್ತೆಗಳಲ್ಲಿ ರಾಶಿ ಬಿದ್ದಿರುವ ತ್ಯಾಜ್ಯವನ್ನು ತ್ವರಿತವಾಗಿ ತೆರವುಗೊಳಿಸಬೇಕು, ಇಲ್ಲವಾದರೆ ಆಯುಕ್ತರು ಮತ್ತು ಇಂಜಿನಿಯರ್‌ಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪುನರುಚ್ಚರಿಸಿದರು.

Leave a Reply

Your email address will not be published. Required fields are marked *