

ಧಾರವಾಡ: ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠದ ಕಾನೂನು ಸೇವಾ ಸಮಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಧಾರವಾಡ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಧಾರವಾಡ ಮತ್ತು ಗದಗ ಜಿಲ್ಲೆಯ ಮಧ್ಯಸ್ಥಿಕೆಗಾರರಿಗಾಗಿ 02 ದಿನಗಳ ಪುನಶ್ಚೇತನ ಕಾರ್ಯಾಗಾರವನ್ನು ಸೆಪ್ಟೆಂಬರ್ 27, 2025 ರಂದು ಧಾರವಾಡದ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಾಗಾರ ಉದ್ಘಾಟನೆ:
ಕಾರ್ಯಾಗಾರದ ಉದ್ಘಾಟನೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಬಿ. ಎಸ್. ಭಾರತಿ ಅವರು ನೆರವೇರಿಸಿದರು.
ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, “90 ದಿನಗಳು ದೇಶಕ್ಕಾಗಿ” ಎಂಬ ಘೋಷವಾಕ್ಯದೊಂದಿಗೆ ಮಧ್ಯಸ್ಥಿಕೆ ಮತ್ತು ಸಂಧಾನ ಪ್ರಕ್ರಿಯೆ ದೇಶದ ಎಲ್ಲಾ ನ್ಯಾಯಾಲಯಗಳಲ್ಲಿ ನಡೆಯುತ್ತಿದೆ. ಮಧ್ಯಸ್ಥಿಕೆದಾರರು ಇದರಲ್ಲಿ ಉತ್ಸಾಹದಿಂದ ಭಾಗವಹಿಸಿ, ಯಶಸ್ವಿಗೊಳಿಸಲು ಕರೆ ನೀಡಿದರು.
ಮಧ್ಯಸ್ಥಿಕೆ ಮಹತ್ವ:
ಮಧ್ಯಸ್ಥಿಕೆ ನ್ಯಾಯದಾನ ವ್ಯವಸ್ಥೆಯಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸಿದೆ. ಆದ್ದರಿಂದ, ಮಧ್ಯಸ್ಥಿಕೆಗಾರರು ಪಕ್ಷಗಾರರೊಂದಿಗೆ ಪ್ರೀತಿ, ವಿಶ್ವಾಸ ಹಾಗೂ ತಾಳ್ಮೆಯಿಂದ ವಸ್ತುಸ್ಥಿತಿ ತಿಳಿದುಕೊಂಡು ಅವರಿಗೆ ತಿಳಿ ಹೇಳಿ, ಪ್ರಕರಣಗಳಲ್ಲಿ ರಾಜಿ ಸಂಧಾನ ಮಾಡಿಸುವುದು ತುಂಬಾ ಅವಶ್ಯಕವಾಗಿದೆ ಎಂದು ನ್ಯಾಯಾಧೀಶರು ತಿಳಿಸಿದರು. ತರಬೇತಿಯಲ್ಲಿ ಹೆಚ್ಚಿನ ಅನುಭವ ಪಡೆದುಕೊಳ್ಳುವಂತೆ ಮಧ್ಯಸ್ಥಿಕೆದಾರರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗಿ:
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪರಶುರಾಮ ಎಸ್. ದೊಡ್ಡಮನಿ, ಕರ್ನಾಟಕ ವಕೀಲರ ಪರಿಷತ್ತಿನ ಸದಸ್ಯರಾದ ಆನಂದಕುಮಾರ ಎ. ಮಗದುಮ ಹಾಗೂ ವಿ. ಡಿ. ಕಾಮರಡ್ಡಿ, ಶ್ರೀ ಅಶೋಕ ಏಣಗಿ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಲಕ್ಷ್ಮೀಶ ರಾವ್, ಬೆಂಗಳೂರು ಮಧ್ಯಸ್ಥಿಕೆ ತರಬೇತಿದಾರರಾದ ಬೀನಾ ದೇವರಾಜ ಅವರು ಭಾಗವಹಿಸಿದ್ದರು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ವರದಿಯಲ್ಲಿ ತಿಳಿಸಿದ್ದಾರೆ.

