
ಮಂಗಳೂರು: ಮುಂಬೈನಿಂದ ಮಂಗಳೂರಿಗೆ ಮಾದಕದ್ರವ್ಯ ಸಾಗಿಸಿ ಮಾರಾಟ ಮಾಡುತ್ತಿದ್ದ ಅಂತರ-ರಾಜ್ಯ ಜಾಲವನ್ನು ಮಂಗಳೂರು ಪೊಲೀಸರು ಪತ್ತೆ ಹಚ್ಚಿದ್ದಾರೆ. ನಗರ ಸಿಸಿಬಿ ಪೊಲೀಸರು ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಒಟ್ಟು ₹24.20 ಲಕ್ಷ ಮೌಲ್ಯದ ಕೊಕೇನ್ ಮತ್ತು ಎಂಡಿಎಂಎ ವಶಕ್ಕೆ ಪಡೆಯಲಾಗಿದೆ.
ಮೊದಲ ದಾಳಿ: ಕಾವೂರಿನಲ್ಲಿ ಇಬ್ಬರು ಬಂಧನ
ಪೊಲೀಸ್ ಅಧಿಕಾರಿಗಳಿಗೆ ದೊರೆತ ಖಚಿತ ಮಾಹಿತಿ ಮೇರೆಗೆ, ಸಿಸಿಬಿ ಘಟಕದ ಪೊಲೀಸರು ಕಾವೂರಿನ ಗಾಂಧಿನಗರದ ಮಲ್ಲಿ ಲೇಔಟ್ನಲ್ಲಿ ದಾಳಿ ನಡೆಸಿದರು. ಈ ವೇಳೆ ಸ್ಕೂಟರ್ನಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಯುವಕರನ್ನು ತಡೆದು ನಿಲ್ಲಿಸಿ ವಿಚಾರಿಸಿದ್ದಾರೆ. ಪೊಲೀಸರನ್ನು ಕಂಡ ಕೂಡಲೇ ಪರಾರಿಯಾಗಲು ಯತ್ನಿಸಿದ ಇವರನ್ನು ವಶಕ್ಕೆ ಪಡೆದಾಗ ಅವರು ಕಾವೂರು ನಿವಾಸಿಗಳಾದ ಚಿರಾಗ್ ಸನಿಲ್ ಮತ್ತು ಆಲ್ವಿನ್ ಕ್ಲಿಂಟನ್ ಡಿಸೋಜ ಎಂದು ತಿಳಿದುಬಂದಿದೆ.
ಇವರಿಂದ ₹22.30 ಲಕ್ಷ ಮೌಲ್ಯದ 111.83 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ, ಕೇರಳದ ಅಬ್ದುಲ್ ಕರೀಂ ಎಂಬಾತ ನೀಡಿದ ಹಣದಿಂದ ಮುಂಬೈನ ಆಫ್ರಿಕನ್ ಪ್ರಜೆ ಬೆಂಜಮಿನ್ನಿಂದ ಚಿರಾಗ್ ಸನಿಲ್ ಮಾದಕದ್ರವ್ಯವನ್ನು ಖರೀದಿಸಿ ತಂದಿರುವುದಾಗಿ ತಿಳಿದುಬಂದಿದೆ. ಈ ಪ್ರಕರಣದ ಮತ್ತೊಬ್ಬ ಆರೋಪಿಯಾದ ಅಬ್ದುಲ್ ಕರೀಂ ಇ.ಕೆ. ಯನ್ನು ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದಾರೆ.
ಎರಡನೇ ದಾಳಿ: ಬರ್ಕೆಯಲ್ಲಿ ಮೂವರ ಬಂಧನ
ಪೊಲೀಸರ ತೀವ್ರ ವಿಚಾರಣೆ ವೇಳೆ, ಆರೋಪಿಗಳು ತಾವು ಈಗಾಗಲೇ ಮೂವರು ವ್ಯಕ್ತಿಗಳಿಗೆ ಕೊಕೇನ್ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಮಾಹಿತಿಯ ಮೇರೆಗೆ ಪೊಲೀಸರು ಎರಡನೇ ಕಾರ್ಯಾಚರಣೆ ನಡೆಸಿದರು. ಸೆಪ್ಟೆಂಬರ್ 21ರ ರಾತ್ರಿ ಮಣ್ಣಗುಡ್ಡೆಯ ಸೆಂಟ್ರಲ್ ವೇರ್ಹೌಸ್ ಬಳಿ ಮೂರು ಸ್ಕೂಟರ್ಗಳಲ್ಲಿ ನಿಂತಿದ್ದ ಮೂವರನ್ನು ಪೊಲೀಸರು ಸುತ್ತುವರಿದರು.
ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ ಈ ಆರೋಪಿಗಳನ್ನು ಬಂಧಿಸಲಾಗಿದ್ದು, ಇವರು ಜನನ್, ರಾಜೇಶ್ ಬಂಗೇರ ಮತ್ತು ವರುಣ್ ಗಾಣಿಗ ಎಂದು ತಿಳಿದುಬಂದಿದೆ. ಇವರಿಂದ ₹1.90 ಲಕ್ಷ ಮೌಲ್ಯದ 21.03 ಗ್ರಾಂ ಕೊಕೇನ್ ವಶಪಡಿಸಿಕೊಳ್ಳಲಾಗಿದೆ.
ಎರಡೂ ಪ್ರಕರಣಗಳಲ್ಲಿ ಬಂಧಿತರಾಗಿರುವ ಆರು ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣಗಳ ತನಿಖೆ ಮುಂದುವರಿದಿದೆ

