

ಪೋಟೋ: ಸವದತ್ತಿ ಎಲ್ಲಮ್ಮ ದೇವಸ್ಥಾನದ ದಕ್ಷಿಣ ದ್ವಾರದ ಎದುರು ಭಾರೀ ಪ್ರಮಾಣದಲ್ಲಿ ಮಳೆ ನೀರು ತುಂಬಿ ಹರಿಯುತ್ತಿರುವದರಿಂದ ಕೆಲ ವಾಹನಗಳು ಸಿಲಿಕೊಕೊಂಡಿರುವದು.
ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆಗೆ, ಯಲ್ಲಮ್ಮ ದೇವಸ್ಥಾನವು ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಬೆಟ್ಟ-ಗುಡ್ಡಗಳಿಂದ ಹರಿದು ಬಂದ ರಭಸದ ನೀರು, ತಗ್ಗು ಪ್ರದೇಶದಲ್ಲಿರುವ ಎಣ್ಣೆಹೊಂಡ, ಕ್ಯೂ ಲೈನ್, ದೇಗುಲದ ಪ್ರಾಂಗಣ, ಮತ್ತು ಮಲ್ಲಿಕಾರ್ಜುನ ದೇವಸ್ಥಾನದೊಳಗೆ ನುಗ್ಗಿದ್ದರಿಂದ ಪ್ರವಾಹದ ಪರಿಸ್ಥಿತಿ ಉಂಟಾದಂತೆ ಭಾಸವಾಗುತ್ತಿತ್ತು.
ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಸುರಿದ ಈ ಭಾರೀ ಮಳೆಯಿಂದಾಗಿ, ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತಾದಿಗಳು ತೀವ್ರ ತೊಂದರೆ ಅನುಭವಿಸಿದರು. ಸಂಜೆ ಪೂಜೆಯ ಕಾರಣದಿಂದ ದೇವಿಯ ದರ್ಶನ ಸ್ಥಗಿತಗೊಂಡಿದ್ದರಿಂದ ಭಕ್ತರು ದೇವಸ್ಥಾನದ ಒಳಭಾಗದಲ್ಲಿ ಇರಲಿಲ್ಲ. ಆದರೆ, ದೇವಸ್ಥಾನದ ಎದುರಿನ ಕಾಂಪ್ಲೆಕ್ಸ್, ಕಚೇರಿಗಳು ಮತ್ತು ಅಂಗಡಿಗಳಿಗೂ ನೀರು ನುಗ್ಗಿತ್ತು. ಇದರಿಂದ ಕಚೇರಿಯ ಕೆಲವು ದಾಖಲೆಗಳು ನೆನೆದು ಹೋಗಿದ್ದು, ಅಂಗಡಿಗಳಲ್ಲಿನ ಸಾಮಗ್ರಿಗಳಿಗೂ ಹಾನಿಯಾಗಿದೆ. ಮಳೆ ನಿಂತ ನಂತರವೂ ಸುಮಾರು 30 ನಿಮಿಷಗಳ ಕಾಲ ಪ್ರಾಂಗಣದಲ್ಲಿ ನೀರು ನಿಂತು ಹೊಂಡದಂತಾಗಿತ್ತು. ನೀರು ಸಂಪೂರ್ಣವಾಗಿ ಹೋದ ನಂತರವಷ್ಟೇ ಸ್ವಚ್ಛಗೊಳಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ದೇವಸ್ಥಾನದ ಆಡಳಿತ ತಿಳಿಸಿದೆ.
ತಾಲ್ಲೂಕಿನಲ್ಲಿ ಪ್ರವಾಹ ಪರಿಸ್ಥಿತಿ: ಜನಜೀವನ ಅಸ್ತವ್ಯಸ್ತ
ಸವದತ್ತಿ ತಾಲೂಕಿನಾದ್ಯಂತ ಸುರಿದ ಮಳೆಯಿಂದಾಗಿ ಸಿದ್ಧನಕೊಳ್ಳ, ಸಂಗಪ್ಪನಕೊಳ್ಳ, ಮತ್ತು ದಬದಭೆಗಳು ಭೋರ್ಗರೆದು ಹರಿದವು. ಬಸ್ಸುಗಳು ಹಾಗೂ ಇತರ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಜನರು ಈ ದೃಶ್ಯಗಳನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಇದರ ಜೊತೆಗೆ, ಕಟಕೋಳ ಮತ್ತು ಬ್ಯಾಂಕ್ ರಸ್ತೆಯಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಹಾವು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು.
ಈ ಮಳೆ ಸಮಸ್ಯೆಯ ಕುರಿತು ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಮತ್ತು ಇತರ ಅಧಿಕಾರಿಗಳು ಮಳೆಯಲ್ಲೇ ನಗರ ಸಂಚಾರ ನಡೆಸಿ ಪರಿಶೀಲನೆ ನಡೆಸಿದರು. ಮುಚ್ಚಿ ಹೋಗಿದ್ದ ಗಟಾರುಗಳು ಹಾಗೂ ತುಂಬಿದ್ದ ಚರಂಡಿಗಳನ್ನು ಪುರಸಭೆ ಸಿಬ್ಬಂದಿ ಸ್ವಚ್ಛಗೊಳಿಸಿದರು. ರಾಮಾಪುರ ಸೈಟ್, ಮರೆಮ್ಮದೇವಿ ದೇವಸ್ಥಾನ, ಖಾದಿ ಗ್ರಾಮೋದ್ಯೋಗ, ದೇವಸಾನ, ಬೆಳುಬ್ಬಿ, ಜನತಾ ಬೇವಿನಕಟ್ಟ, ಭಗೀರಥ ವೃತ್ತ, ಸವಳಭಾವಿ, ಚಿನಿವಾಲರ, ಕೊಳ್ಳಾರ, ಹಗ್ಗದೇವರ, ಬಾಲೇಶನವರ, ಹೊಸಪೇಟಿ, ಗಿರಿಜಣ್ಣವರ, ಬೆಣ್ಣೆಕಟ್ಟಿ ಕುಂಬಾರ, ಕಲಾದಗಿ, ದಿವಟಗಿ ಓಣಿ ಮತ್ತು ಮೊಖಾಶಿ ಗಲ್ಲಿಗಳಲ್ಲಿ ನೀರು ರಸ್ತೆಗಳ ಮೇಲೆ ಹರಿಯಿತು. ರಸ್ತೆಯಲ್ಲಿ ನಿಂತಿದ್ದ ಕೆಲವು ವಾಹನಗಳ ಇಂಜಿನ್ಗಳಿಗೆ ನೀರು ನುಗ್ಗಿ ಹಾನಿಗೊಳಗಾದ ವರದಿಗಳಿವೆ. ಅಲ್ಲದೆ, ದನಕರುಗಳಿಗೆ ಸಂಗ್ರಹಿಸಿಟ್ಟಿದ್ದ ಮೇವು ಸಹ ಹಲವೆಡೆ ಕೊಚ್ಚಿಹೋಗಿದೆ.
ಶಾಶ್ವತ ಪರಿಹಾರಕ್ಕೆ ಒತ್ತಾಯ
ಉಗರಗೋಳ, ಹಿರೇಕುಂಬಿ, ಚುಳಕಿ ಮತ್ತು ಚಿಕ್ಕುಂಬಿ ಗ್ರಾಮಗಳಲ್ಲಿ ಮಳೆಯಿಂದಾಗಿ ರಸ್ತೆ ಸಂಚಾರ ಕೆಲ ಕಾಲ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸವದತ್ತಿ ನಾಗರಿಕ ವೇದಿಕೆಯ ಪ್ರಮುಖರಾದ ಮಲ್ಲಿಕಾರ್ಜುನ ಅವರು ಮಾತನಾಡಿ, ಮಳೆ ಬಂದಾಗ ಮಾತ್ರ ನಗರಕ್ಕೆ ಭೇಟಿ ನೀಡುವ ಅಧಿಕಾರಿಗಳು ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿದರು. ಕಾಂಪ್ಲೆಕ್ಸ್ ನಿರ್ಮಾಣದಿಂದ ನೀರು ಸುಗಮವಾಗಿ ಹರಿಯುತ್ತಿಲ್ಲ, ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

