
ಮದ್ದೂರು (ಮಂಡ್ಯ): ಎರಡು ದಿನಗಳ ಹಿಂದೆ ಕಲ್ಲು ತೂರಾಟ ನಡೆದು ಉದ್ವಿಗ್ನಗೊಂಡಿದ್ದ ಮದ್ದೂರು ಪಟ್ಟಣದಲ್ಲಿ ಇಂದು ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ನಡೆಯಲಿದೆ. ಅಹಿತಕರ ಘಟನೆಗಳು ಮರುಕಳಿಸದಂತೆ ಮುಂಜಾಗ್ರತೆ ವಹಿಸಿರುವ ಪೊಲೀಸರಿಗೆ, ಈ ಮೆರವಣಿಗೆ ಒಂದು ಸವಾಲಾಗಿ ಪರಿಣಮಿಸಿದೆ.
ಪೇಟೆ ಬೀದಿ ಮತ್ತು ಕೊಲ್ಲಿ ಸರ್ಕಲ್ ಮಾರ್ಗವಾಗಿ ಶಿಂಷಾ ನದಿಯತ್ತ ಸಾಗುವ ಸುಮಾರು 3 ಕಿ.ಮೀ. ಉದ್ದದ ಈ ಮೆರವಣಿಗೆಯಲ್ಲಿ 28 ಗಣೇಶ ಮೂರ್ತಿಗಳು ಭಾಗವಹಿಸಲಿವೆ. ಮೆರವಣಿಗೆ ಬೆಳಿಗ್ಗೆ 10:30ಕ್ಕೆ ನಗರದ ಐಬಿ ವೃತ್ತದಿಂದ ಆರಂಭವಾಗಲಿದೆ.
ಬಿಜೆಪಿ ನಾಯಕರ ಭಾಗಿ:
ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ. ಇದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಬೃಹತ್ ಪೊಲೀಸ್ ಸರ್ಪಗಾವಲು:
ಯಾವುದೇ ರೀತಿಯ ಗಲಭೆಗಳು ನಡೆಯದಂತೆ ತಡೆಯಲು ಮದ್ದೂರು ಪಟ್ಟಣದಾದ್ಯಂತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು, 2000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ, ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಪಟ್ಟಣದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ಮೆರವಣಿಗೆಯ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯನ್ನು ಪೊಲೀಸರು ವಹಿಸಿಕೊಂಡಿದ್ದು, ಯಾವುದೇ ಲೋಪಗಳು ನಡೆಯದಂತೆ ಎಚ್ಚರ ವಹಿಸಿದ್ದಾರೆ.

