
ಕುಂದಗೋಳ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೆಎಲ್‌ಇ ಕಾಲೇಜ್ ಆಫ್ ಫಿಸಿಯೋಥೆರಪಿ ವತಿಯಿಂದ ಮೂರು ದಿನಗಳ ಉಚಿತ ಫಿಸಿಯೋಥೆರಪಿ ಶಿಬಿರಕ್ಕೆ ಚಾಲನೆ ನೀಡಲಾಗಿದೆ. ಫಿಸಿಯೋಥೆರಪಿ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನಾ ಘಟಕ-16 ಸಹಯೋಗದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ.
ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಶಾಂತ್ ಮುಕ್ಕಣ್ಣವರ ಅವರು ಶಿಬಿರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನಾಕಾರರಾದ ಡಾ. ನವಮಿ ಮಹಾವೀರ, ಡಾ. ಆರತಿ ಪ್ರಯಾಗ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಸುಮಾ ಪಾಟೀಲ್ ಹಾಗೂ ಸಂಯೋಜನಾಧಿಕಾರಿ ಡಾ. ಶ್ರೀಮತಿ ಅಶ್ವಿನಿ ನರಸಣ್ಣವರ ಉಪಸ್ಥಿತರಿದ್ದರು. ತಾಲೂಕು ವೈದ್ಯಾಧಿಕಾರಿ ಡಾ. ಶಂಕರಪ್ಪ ಎಸ್. ತುಕ್ಕಣ್ಣವರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಶಿಬಿರದಲ್ಲಿ ಬೆನ್ನು ನೋವು, ಮೊಣಕಾಲು ನೋವು, ಸ್ಟ್ರೋಕ್ ನಂತರದ ಪುನಶ್ಚೇತನ, ಸಂಧಿವಾತ, ಮಹಿಳೆಯರ ಆರೋಗ್ಯ ಸಮಸ್ಯೆಗಳು, ಅಸ್ತಮಾ, ಉಸಿರಾಟದ ತೊಂದರೆಗಳು ಮತ್ತು ಹಿರಿಯ ನಾಗರಿಕರ ಪುನಶ್ಚೇತನದಂತಹ ಸಮಸ್ಯೆಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು.
ಈ ಶಿಬಿರವು ಇಂದು, ಹಾಗು ದಿ. 9 ಮತ್ತು ದಿ. 10 ರಂದು ನಡೆಯಲಿದ್ದು, ಕುಂದಗೋಳ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕೋರಲಾಗಿದೆ.

