ಯೂತ್ ಕಾಂಗ್ರೆಸ್ ಪಂಜಿನ ಮೆರವಣಿಗೆಯಲ್ಲಿ ಬಣ ರಾಜಕೀಯ: ಕೋಲಾರದಲ್ಲಿ ಗದ್ದಲ

Spread the love

ಕೋಲಾರ: ಮತ ಕಳ್ಳತನ ವಿರೋಧಿಸಿ ಕೋಲಾರ ನಗರದಲ್ಲಿ ಭಾನುವಾರ ನಡೆದ ಯೂತ್ ಕಾಂಗ್ರೆಸ್ ಪಂಜಿನ ಮೆರವಣಿಗೆಯಲ್ಲಿ ಬಣ ರಾಜಕೀಯ ಸ್ಪಷ್ಟವಾಗಿ ಗೋಚರಿಸಿದೆ.

ಕಾರ್ಯಕ್ರಮದ ಯಶಸ್ಸಿನ ಶ್ರೇಯಸ್ಸಿಗೆ ಸಂಬಂಧಿಸಿದಂತೆ ರಾಜ್ಯ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುನಿಲ್ ನಂಜೇಗೌಡ ಮತ್ತು ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ರಿದ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಗಲಾಟೆ ತಾರಕಕ್ಕೇರಿ, ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು.
ಮೆರವಣಿಗೆಯ ನೇತೃತ್ವವನ್ನು ಯಾರು ವಹಿಸಬೇಕು ಎಂಬುದರ ಕುರಿತು ಎರಡೂ ಬಣಗಳ ನಡುವೆ ವಾಗ್ವಾದ ಆರಂಭವಾಯಿತು.

ಸುನಿಲ್ ನಂಜೇಗೌಡ ಬೆಂಬಲಿಗರು ಕೋಲಾರದ ಮುಖಂಡರ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದರು. ಇದರಿಂದ ಕುಪಿತಗೊಂಡ ಸೈಯದ್ ಅಫ್ರಿದ್ ಬೆಂಬಲಿಗರು ಶಾಸಕರ ಮಗ ಎಂಬ ಕಾರಣಕ್ಕೆ ಸುನಿಲ್ ದರ್ಪ ತೋರಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ತಾವೇ ಹಣ ಖರ್ಚು ಮಾಡಿರುವುದಾಗಿ ಅಫ್ರಿದ್ ಹೇಳಿದರು.

ಪಂಜಿನ ಮೆರವಣಿಗೆಯು ಎರಡು ಗುಂಪುಗಳ ನಡುವಿನ ಗೊಂದಲಕ್ಕೆ ಮತ್ತಷ್ಟು ಕಾರಣವಾಯಿತು. ಸುನಿಲ್ ನಂಜೇಗೌಡ ಬಣ ಬಂಗಾರಪೇಟೆ ವೃತ್ತದವರೆಗೆ ಮೆರವಣಿಗೆಗೆ ಅನುಮತಿ ಪಡೆದಿದ್ದರೂ, ಅದನ್ನು ಉಲ್ಲಂಘಿಸಿ ಇಟಿಸಿಎಂ ವೃತ್ತದ ಕಡೆಗೆ ಸಾಗಿತು. ಅದೇ ರೀತಿ, ಸೈಯದ್ ಅಫ್ರಿದ್ ಬಣವು ಇಟಿಸಿಎಂ ವೃತ್ತದಿಂದ ಪದವಿ ಕಾಲೇಜು ವೃತ್ತದವರೆಗೆ ಮೆರವಣಿಗೆ ನಡೆಸಲು ಅನುಮತಿ ಪಡೆದಿತ್ತು. ಹೀಗಾಗಿ, ಎರಡೂ ಬಣಗಳು ಇಟಿಸಿಎಂ ವೃತ್ತದಲ್ಲಿ ಮುಖಾಮುಖಿಯಾದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.

ಘಟನೆಯಲ್ಲಿ ಸುನಿಲ್ ನಂಜೇಗೌಡ ಬಣದವರ ಸಂಖ್ಯೆ ಹೆಚ್ಚಿತ್ತು. ವಾಗ್ವಾದವು ಗದ್ದಲಕ್ಕೆ ತಿರುಗಿದಾಗ, ಪೊಲೀಸರು ತಕ್ಷಣ ಮಧ್ಯ ಪ್ರವೇಶಿಸಿ ಎರಡೂ ಗುಂಪುಗಳನ್ನು ಚದುರಿಸಲು ಪ್ರಯತ್ನಿಸಿದರು. ಸುನಿಲ್ ನಂಜೇಗೌಡ ಬಣ ವೇದಿಕೆ ಕಾರ್ಯಕ್ರಮಕ್ಕೆ ಹೋಗದಂತೆ ಪೊಲೀಸರು ತಡೆದರು. ತಮ್ಮ ನಾಯಕನನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ, ಸುನಿಲ್ ಬೆಂಬಲಿಗರು ಅವರೊಂದಿಗೆ ಹಿಂದಿರುಗಿದರು.

ಇನ್ನೊಂದೆಡೆ, ಸೈಯದ್ ಅಫ್ರಿದ್ ಬಣವು ನಿಗದಿಯಂತೆ ಫುಡ್ ಕೋರ್ಟ್ ಬಳಿ ವೇದಿಕೆ ಕಾರ್ಯಕ್ರಮ ನಡೆಸಿತು. ಈ ಕಾರ್ಯಕ್ರಮದಲ್ಲಿ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಉದಯ ಬಾನು, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮತ್ತು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಆದರೆ, ಉದಯ ಬಾನು ಅವರನ್ನು ಸ್ವಾಗತಿಸಿದ್ದು ಮಾತ್ರ ಸುನಿಲ್ ನಂಜೇಗೌಡ ಬಣದವರು.

ಮಾಧ್ಯಮದವರೊಂದಿಗೆ ಮಾತನಾಡಿದ ಸುನಿಲ್ ನಂಜೇಗೌಡ, ಬ್ಯಾನರ್ ವಿಚಾರಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ಸಮಸ್ಯೆಗಳಾಗಿವೆ. ನಾವೆಲ್ಲರೂ ಕೂತು ಚರ್ಚಿಸಿ ಅದನ್ನು ಬಗೆಹರಿಸಿಕೊಳ್ಳುವುದಾಗಿ ತಿಳಿಸಿದರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್, ಗಲ್‌ಪೇಟೆ ಸರ್ಕಲ್ ಇನ್‌ಸ್ಪೆಕ್ಟರ್ ಲೋಕೇಶ್, ಮತ್ತು ನಗರ ಠಾಣೆ ಇನ್‌ಸ್ಪೆಕ್ಟರ್ ಸದಾನಂದ ನೇತೃತ್ವದಲ್ಲಿ ಪೊಲೀಸರು ಹರಸಾಹಸ ಪಟ್ಟರು.

Leave a Reply

Your email address will not be published. Required fields are marked *