ರಸ್ತೆ ಅಪಘಾತ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ಕಡ್ಡಾಯ: ಸರ್ಕಾರದ ಸುತ್ತೋಲೆ

Spread the love

ಬೆಂಗಳೂರು: ರಾಜ್ಯದಲ್ಲಿ ಸಂಭವಿಸುವ ರಸ್ತೆ ಅಪಘಾತ ಸಂತ್ರಸ್ತರಿಗೆ ತುರ್ತು ಪರಿಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗಳು ಉಚಿತ ಚಿಕಿತ್ಸೆ ನೀಡುವುದು ಕಡ್ಡಾಯ ಎಂದು ಕರ್ನಾಟಕ ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಈ ಕುರಿತು ಸೆಪ್ಟೆಂಬರ್ 3, 2025ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ.

ಸರ್ಕಾರದ ನಿರ್ದೇಶನ ಪ್ರಕಾರ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯಿದೆ 2007ರ ಅನ್ವಯ ರಸ್ತೆ ಅಪಘಾತ, ಸುಟ್ಟ ಗಾಯ, ವಿಷ ಸೇವನೆ ಹಾಗೂ ಕ್ರಿಮಿನಲ್ ದಾಳಿಗಳಿಂದ ಪೀಡಿತರಾದವರನ್ನೂ “ಅಪಘಾತ ಸಂತ್ರಸ್ತರು” ಎಂದು ಪರಿಗಣಿಸಿ, ಯಾವುದೇ ಮುಂಗಡ ಪಾವತಿ ಬೇಡದೆ ತಕ್ಷಣ ಚಿಕಿತ್ಸೆ ನೀಡಬೇಕು. ನಿಯಮ ಉಲ್ಲಂಘಿಸಿದರೆ ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ.

ಇದೇ ರೀತಿಯಲ್ಲಿ, ಕರ್ನಾಟಕ ಗುಡ್ ಸಮರಿಟನ್ ಮತ್ತು ವೈದ್ಯಕೀಯ ವೃತ್ತಿಪರರ ಕಾಯಿದೆ 2016ರ ಸೆಕ್ಷನ್ 6 ಪ್ರಕಾರ, ಅಪಘಾತ ಸಂತ್ರಸ್ತರು ಆಸ್ಪತ್ರೆಗೆ ಬಂದ ಕೂಡಲೇ ಉಚಿತ ವೈದ್ಯಕೀಯ ತಪಾಸಣೆ ಮತ್ತು ಪ್ರಥಮ ಚಿಕಿತ್ಸೆ ನೀಡುವುದು ಕಡ್ಡಾಯ. ಅಗತ್ಯವಿದ್ದಲ್ಲಿ ಮುಂದಿನ ಚಿಕಿತ್ಸೆಯೂ ಒದಗಿಸಬೇಕು. ಆಸ್ಪತ್ರೆಯಲ್ಲಿ ಬೇಕಾದ ಸೌಲಭ್ಯಗಳಿಲ್ಲದಿದ್ದರೆ, ರೋಗಿಯನ್ನು ಸೂಕ್ತ ರೀತಿಯಲ್ಲಿ ಇನ್ನೊಂದು ಆಸ್ಪತ್ರೆಗೆ ವರ್ಗಾಯಿಸುವ ವ್ಯವಸ್ಥೆ ಮಾಡಬೇಕೆಂದು ಸೂಚಿಸಲಾಗಿದೆ.

ಸಮಯಕ್ಕೆ ಸರಿಯಾದ ವೈದ್ಯಕೀಯ ಸಹಾಯ ದೊರೆಯುವಂತೆ ಮಾಡುವುದೇ ಈ ಸುತ್ತೋಲೆಯ ಉದ್ದೇಶವಾಗಿದೆ. ನಿಯಮ ಉಲ್ಲಂಘನೆ ನಡೆದರೆ ಸಂಬಂಧಪಟ್ಟ ಅಧಿಕಾರಿಗಳು ದೂರು ದಾಖಲಿಸಲು ಮತ್ತು ಕ್ರಮ ಕೈಗೊಳ್ಳಲು ಅಧಿಕಾರ ಹೊಂದಿದ್ದಾರೆ. ಸರ್ಕಾರ ಈ ನಿರ್ದೇಶನಗಳ ಅನುಷ್ಠಾನವನ್ನು ಕಟ್ಟುನಿಟ್ಟಾಗಿ ಖಚಿತಪಡಿಸಿಕೊಳ್ಳಲಿದೆ ಎಂದು ತಿಳಿಸಿದೆ.

Leave a Reply

Your email address will not be published. Required fields are marked *