
ಧಾರವಾಡ: ಜಿಲ್ಲೆಯ ಛಾಯಾಗ್ರಾಹಕರು ಮತ್ತು ವಿಡಿಯೋಗ್ರಾಫರ್‌ಗಳಿಗೆ ಅಸಂಘಟಿತ ಕಾರ್ಮಿಕ ಕಾರ್ಡ್ ನೋಂದಣಿಗಾಗಿ ಸೆಪ್ಟೆಂಬರ್ 9 ಮತ್ತು 10 ರಂದು ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಮಿಕ ಇಲಾಖೆಯ ಸವಲತ್ತುಗಳನ್ನು ಪಡೆಯಲು ಈ ಅವಕಾಶವನ್ನು ಬಳಸಿಕೊಳ್ಳುವಂತೆ ವಾರ್ತಾ ಮತ್ತು ಕಾರ್ಮಿಕ ಇಲಾಖೆಗಳು ಪ್ರಕಟಣೆ ಹೊರಡಿಸಿವೆ.
ಈ ಕುರಿತು ಸೆ:05 ರಂದು ವಾರ್ತಾ ಇಲಾಖೆಯಲ್ಲಿ ನಡೆದ ಸಭೆಯಲ್ಲಿ ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ತಾಲ್ಲೂಕುಗಳ ಛಾಯಾಗ್ರಾಹಕರ ಸಂಘಗಳ ಅಧ್ಯಕ್ಷರು ಭಾಗವಹಿಸಿದ್ದರು. ಅಭಿಯಾನದ ಅಡಿಯಲ್ಲಿ, ಸೆಪ್ಟೆಂಬರ್ 9 ಮತ್ತು 10 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕಾರ್ಮಿಕ ಇಲಾಖೆ ಕಚೇರಿಗಳಲ್ಲಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ನೋಂದಣಿಗೆ ಅಗತ್ಯವಿರುವ ದಾಖಲೆಗಳು:
ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಛಾಯಾಗ್ರಾಹಕರು ಒಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಬ್ಯಾಂಕ್ ಪಾಸ್‌ಬುಕ್ ಝೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಪ್ರತಿ ಹಾಗೂ ಪಡಿತರ ಚೀಟಿ (ಲಭ್ಯವಿದ್ದರೆ) ತೆಗೆದುಕೊಂಡು ಬರಬೇಕು. ಈಗಾಗಲೇ ಅಸಂಘಟಿತ ಕಾರ್ಮಿಕ ಕಾರ್ಡ್ ಹೊಂದಿರುವವರು ಸಹ ಈ ದಿನಾಂಕದಂದು ತಮ್ಮ ನೋಂದಣಿಯನ್ನು ದೃಢಪಡಿಸಿಕೊಳ್ಳಬಹುದಾಗಿದೆ.
ಈ ಅಭಿಯಾನವು ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಕಲಘಟಗಿ, ನವಲಗುಂದ, ಅಣ್ಣಿಗೇರಿ ಮತ್ತು ಕುಂದಗೋಳ ತಾಲ್ಲೂಕುಗಳಲ್ಲಿನ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಗಳಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಮಾರಿಕಾಂಬಾ (9480068995), ಅಕ್ಬರ್ ಮುಲ್ಲಾ (9964178078), ಲತಾ (9986594945), ಮೀನಾಕ್ಷಿ ಶಿಂದಿಹಟ್ಟಿ (6363520066), ಭುವನೇಶ್ವರಿ ಕೋಟಿಮಠ (7022527066), ಅಕ್ರಂ ಅಲ್ಲಾಪೂರ್ (9606366429), ಅಶೋಕ ವಡಿಯರ್ (70190101998, 9019991255), ರಜನಿ ಹಿರೇಮಠ (9620629013), ಸಂಗೀತಾ ಬೆನಕನಕೊಪ್ಪ (9620727370) ಅವರನ್ನು ಸಂಪರ್ಕಿಸಬಹುದು. ಅಲ್ಲದೆ, ಛಾಯಾಗ್ರಾಹಕರ ಸಂಘದ ಪ್ರಮುಖರಾದ ದತ್ತಪ್ರಸಾದ್ ವೆಂಕಟೇಶ (9845128653), ಕಿರಣ್ ಬಾಕಳೆ (9448136285) ಮತ್ತು ಪ್ರಭಯ್ಯ ಲಕ್ಕುಂಡಿಮಠ (9986268406) ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

