

ಧಾರವಾಡ: ಕ್ರೀಡೆಗೆ ಪ್ರೋತ್ಸಾಹ ಮತ್ತು ದೇಶಿಯ ಕ್ರೀಡೆಯಾದ ಮಲ್ಲಕಂಬವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಹರಲಾಪೂರ ಗ್ರಾಮದಲ್ಲಿ ಗುರುವಾರದಂದು ಜಿಲ್ಲಾ ಮಟ್ಟದ ಮಲ್ಲಕಂಬ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ 14 ರಿಂದ 17 ವರ್ಷದೊಳಗಿನ ಬಾಲಕ, ಬಾಲಕಿಯರಿಗಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳಲ್ಲಿ ಮಲ್ಲಕಂಬ ಸ್ಪರ್ಧೆಗಳು ನಡೆದವು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಧಾರವಾಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಂದಗೋಳ ಹಾಗೂ ಯುವಜನ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಹರಲಾಪೂರ ಇವರ ಸಂಯುಕ್ತ ಆಶ್ರಯದಲ್ಲಿ ನಡೆಸಲಾಯಿತು.
ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಶ್ರೀ ವಿಷ್ಣು ನಾಯ್ಕ, “ಹರಲಾಪೂರದಲ್ಲಿ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿರುವುದು ಸಂತೋಷ ತಂದಿದೆ. ಈ ಗ್ರಾಮದಿಂದ 1987ರಿಂದ ಇಲ್ಲಿಯವರೆಗೆ 90ಕ್ಕೂ ಹೆಚ್ಚು ಯುವಕರು ರಾಷ್ಟ್ರೀಯ ಮಲ್ಲಕಂಬ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ಸಂಗತಿ. ಜೊತೆಗೆ, 25 ಯುವಕರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಮಲ್ಲಕಂಬ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ,” ಎಂದರು
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಮಲ್ಲಕಂಬ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪ್ರಕಾಶ್ ಮ್ಯಾಗೇರಿ,ಯವರು ಮಾತನಾಡಿ “ರಾಜ್ಯಮಟ್ಟದ ಸ್ಪರ್ಧೆಯ ಸಂಘಟನೆ ಇರುವ ಹಾಗೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೀರಿ. ದೇಶಿಯ ಕ್ರೀಡೆಗಳಾದ ಮಲ್ಲಕಂಬವನ್ನು ಉಳಿಸಿ ಬೆಳೆಸಲು ಇಂತಹ ಸಂಘಟನೆಗಳು ಬಹಳ ಅವಶ್ಯಕವಾಗಿವೆ,” ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀ ಬಸವರಾಜ ಬಟ್ಟುರ, ಮಾತನಾಡಿ “ನಮ್ಮ ಊರು ಮಲ್ಲರ ಊರು. ಇಲ್ಲಿ ಪ್ರತಿ ಮನೆಯಲ್ಲೂ ಮಲ್ಲಕಂಬ ಕ್ರೀಡಾಪಟುಗಳಿದ್ದಾರೆ. ನಮ್ಮ ಗ್ರಾಮದಲ್ಲಿ ರಾಜ್ಯ ಮಟ್ಟದ ಮಲ್ಲಕಂಬ ಸ್ಪರ್ಧೆಯನ್ನು ಆಯೋಜಿಸಲು ಅವಕಾಶ ನೀಡಿದರೆ, ಎಲ್ಲ ರೀತಿಯ ಸಹಕಾರವನ್ನು ನೀಡಲು ಸಿದ್ಧರಿದ್ದೇವೆ,” ಎಂದು ಭರವಸೆ ನೀಡಿದರು
ಕಾರ್ಯಕ್ರಮದಲ್ಲಿ ಗ್ರಾಮದ 90 ರಾಷ್ಟ್ರೀಯ ಮಲ್ಲಕಂಬ ಪಟುಗಳು ಹಾಗೂ 24 ಮಂದಿ ತರಬೇತುದಾರರನ್ನು ದಾನಿಗಳ ಸಹಕಾರದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ಮಲ್ಲಕಂಬ ರಾಷ್ಟ್ರೀಯ ಉಪಾಧ್ಯಕ್ಷರಾದ ಎಸ್.ಎಫ್. ಕೊಡ್ಲಿ, ಎಸ್‌ಡಿಎಂಸಿ ಅಧ್ಯಕ್ಷರಾದ ಚಂದ್ರು ಕೊರಡೂರ, ಈರಯ್ಯ ಕೌದಿಮಠ, ಸದಸ್ಯರಾದ ಮುರುಗೇಶ್ ಹೊಸಳ್ಳಿ, ವರ್ಧಮಾನ ಪಾಟೀಲ್, ದಾನಿಗಳಾದ,ಎನ್.ಓ. ಹಡಗಲಿ, ಎಚ್.ಆರ್. ಕತ್ತಿ, ಅಬ್ದುಲ್ ಸಾಬ್ ನದಾಫ್, ವಿನಾಯಕ ಕಲ್ಹಣ್ಣವರ, ಬಿಆರ್‌ಸಿಗಳಾದ ಜೀಗಳೂರ, ಮುಖ್ಯೋಪಾಧ್ಯಾಯರಾದ ರಾಟಿಮನಿ, ರಾಜು ಶಿವನಗೌಡ್ರ, ಅರುಣ್ ಹುಬ್ಬಳ್ಳಿ ಸೇರಿದಂತೆ ಅನೇಕರಿದ್ದರು ಈ
ಈ ಸಮಯದಲ್ಲಿ ಎಫ್.ಬಿ. ನಧಾಪ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುತ್ತು ದಾಟನಾಳ ಸ್ವಾಗತ ಕೋರಿದರು, ಶಂಭು ಕೊಪ್ಪದ ವಂದನಾರ್ಪಣೆ ಮಾಡಿದರು ಹಾಗೂ ಎಸ್.ಎಸ್. ಹಿರೇಮಠ ಅವರು ಕಾರ್ಯಕ್ರಮ ನಿರೂಪಣೆ ನಡೆಸಿಕೊಟ್ಟರು.
ಪೋಟೋ:
ತಾಲ್ಲೂಕಿನ ಹರ್ಲಾಪೂರ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಮಲ್ಲಗಂಬ ಸ್ವರ್ದೆಗೆ ವಿವಿಧ ಗಣ್ಯಮಾನ್ಯರು ದೀಪ ಬೆಳಗಿಸುವದರ ಮೂಲಕ ಚಾಲನೆ ನೀಡಿದರು.

